ನಾನ್ಯಾಕ್ರೀ ಪಟೇಲ್ರನ್ನ ಭೇಟಿಯಾಗಲಿ: ಶೋಭಾ ಮೇಡಂ

'ಹೋಗಿ ಹೋಗಿ ನಾನ್ಯಾಕ್ರೀ ಪಟೇಲ್ರನ್ನ ಭೇಟಿಯಾಗಲಿ. ಆ ಮನುಷ್ಯನ ಫೋಟೋ ಸಹ ನೋಡಿಲ್ಲ ಕಣ್ರೀ ನಾನು' ಎಂದು ಶೋಭಾ ಮೇಡಂ ಗರಂ ಆಗಿದ್ದಾರೆ.
ಅಹ್ಮದ್ ಪಟೇಲ್ ಅವರನ್ನು ಫೋಟೋದಲ್ಲೂ ನೋಡಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿರುವ ಶೋಭಾ ಮೇಡಂ, ರಾಜಕೀಯದಲ್ಲಿ ಏನನ್ನೂ ತಳ್ಳಿಹಾಕುವುದಿಲ್ಲ ಎಂದು ಅಹಮದ್ ಭೇಟಿ ವಿಚಾರವನ್ನು ಜೀವಂತವಾಗಿಟ್ಟಿದ್ದಾರೆ.
ತಮ್ಮ ರಾಜಕೀಯ ಗುರು ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಸೋನಿಯಾ ಅವರ ಅಧೀನದಲ್ಲಿರುವ ಸಿಬಿಐನಿಂದ ಬಿಎಸ್‌ವೈ ವಿರುದ್ಧದ ತನಿಖೆಯ ವೇಗವನ್ನು ನಿಯಂತ್ರಿಸುವಂತೆ ಸೋನಿಯಾ ಮೇಡಂಗೆ ಮನವಿ ಮಾಡಲು ಶೋಭಾ ಮೇಡಂ ಅವರು ಅಹ್ಮದ್ ಪಟೇಲರನ್ನು ರಹಸ್ಯವಾಗಿ ಭೇಟಿಯಾಗಿದ್ದರು. ಜತೆಗೆ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷ ಸೇರುವ ಸಂಬಂಧ ಮಾತುಕತೆ ನಡೆಸಲು ಈ ಭೇಟಿಯಾಗಿದೆ ಎಂದು ವರದಿಯಾಗಿತ್ತು.
ಶೋಭಾ ಮತ್ತೆ ದೆಹಲಿಯತ್ತ: ಈ ಮಧ್ಯೆ, ಶೋಭಾ ಮೇಡಂ ಮತ್ತೆ ದೆಹಲಿಗೆ ಹೊರಟಿದ್ದಾರೆ. ಆದರೆ ಅಧಿಕೃತ ಕಾರ್ಯಕ್ರಮದ ಮೇರೆಗೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 2ನೇ ಘಟಕಕ್ಕೆ ತಕ್ಷಣ ಕಲ್ಲಿದ್ದಲು ಪೂರೈಸುವ ಸಂಬಂದ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಲು ಶೋಭಾ ನಿರ್ಧರಿಸಿದ್ದಾರೆ.
ಈ 2ನೇ ಘಟಕವನ್ನು ಫೆ. 25 ರಂದೇ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ ಕಲ್ಲಿದ್ದಲು ಕೊರತೆಯಿಂದ ಸಾಧ್ಯವಾಗಿರಲಿಲ್ಲ. 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಸ್ಥಾವರಕ್ಕೆ ವಾರ್ಷಿಕ 1.71 ಲಕ್ಷ ಟನ್ ಕಲ್ಲಿದ್ದಲು ಅಗತ್ಯವಿದೆ. ಕೇಂದ್ರವು ಈ ವೇಳೆಗೆ ಕಲ್ಲಿದ್ದಲು ಪೂರೈಸಿದ್ದರೆ ಮೇ 25ರಂದು ಘಟಕ ಕಾರ್ಯಾರಂಭ ಮಾಡುವ ಅಂದಾಜಿತ್ತು. ಆದರೆ ಇದುವರೆಗೆ ಸಕಾರಾತ್ಮಕ ಸ್ಪದಂನೆ ದೊರೆತಿಲ್ಲ. ಹೀಗಾಗಿ, ಶೀಂಧೆ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ.
ಜತೆಗೆ ರಾಜ್ಯದಲ್ಲಿ ಕೃತಕವಾಗಿ ಅಡುಗೆ ಅನಿಲದ ಅಭಾವ ಸೃಷ್ಟಿಯಾಗಿರುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವ ಜೈಪಾಲ ರೆಡ್ಡಿ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವೆ ಶೋಭಾ ಇದೇ ವೇಳೆ ಭೇಟಿಯಾ ಗಲಿದ್ದಾರೆ.












Click it and Unblock the Notifications