ದಕ್ಷ ಅಧಿಕಾರಿ ಮಹಾಂತೇಶ್ ದುರಂತ ಸಾವು

ಮೇ.15ರಂದು ನಗರದ ಏಟ್ರಿಯಾ ಹೋಟೆಲ್ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಾಂತೇಶ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದ ಮಹಾಂತೇಶ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಕೋಮಾಗೆ ಜಾರಿದ್ದ ಮಹಾಂತೇಶ್ ಅವರು ಭಾನುವಾರ ಅಸುನೀಗಿದ್ದಾರೆ. [ವಿಡಿಯೋ ನೋಡಿ]
ಸಹಕಾರಿ ಸಂಘಗಳ ಲೆಕ್ಕ ವಿಭಾಗದ ಉಪ ಆಯುಕ್ತರಾಗಿ ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಈ ಹಿಂದೆ ಕೂಡಾ ಸಾಕಷ್ಟು ಬಾರಿ ಜೀವ ಬೆದರಿಕೆ ಕರೆಗಳು ಬಂದಿತ್ತು. ಹಲ್ಲೆ ಯತ್ನ ಕೂಡಾ ನಡೆದಿತ್ತು.
ಆಕಸ್ಮಿಕವಾಗಿ ಅಪಘಾತದಿಂದ ಮಹಾಂತೇಶ್ ಅವರ ಸಾವು ಸಂಭವಿಸಿದೆ. ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಕೇಸು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ನನ್ನ ಪತಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಮಹಾಂತೇಶ್ ಅವರ ಪತ್ನಿ ಆಗ್ರಹಿಸಿದ್ದಾರೆ.
ಪೊಲೀಸ್ ಆಶ್ವಾಸನೆ: ಮಹಾಂತೇಶ್ ಅವರ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ ಸಿಎಂ ಸದಾನಂದ ಗೌಡರು, ಶೀಘ್ರವೇ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಕೆಎಎಸ್ ಅಧಿಕಾರಿ ಮಹಾಂತೇಶ್ ಅವರ ಹತ್ಯೆ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ. ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ಸುಮಾರು 6 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ಅವರು ಹೇಳಿದ್ದಾರೆ.
ಮಹಾಂತೇಶ್ ಅವರ ಮೃತದೇಹದ ಪರೀಕ್ಷೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆ ನಂತರ ಸತ್ಯ ಹೊರಬೀಳುವ ಸಾಧ್ಯತೆಯಿದೆ.












Click it and Unblock the Notifications