ಸಿಬಿಐ ಭೀತಿ: ಅಜ್ಞಾತಸ್ಥಳಕ್ಕೆ ಹೊರಟ ಯಡಿಯೂರಪ್ಪ

ಎಲ್ಲಿಗೇ ಪಯಣ...ಯಾವುದೋ ದಾರಿ: ನಿನ್ನೆ 'ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ನೋವಿನ ದಿನ' ಕಂಡ ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಬೆಳಗ್ಗೆ ಆರೂ ಮುಕ್ಕಾಲರಲ್ಲಿ ಅದೃಷ್ಟದ ಬೆನ್ನುಹತ್ತಿ 'ಫಾರ್ಚೂನ್' ಕಾರಿನಲ್ಲಿ ಒಬ್ಬಂಟಿಯಾಗಿ ಹೊರಟಿದ್ದಾರೆ. ಬೆಂಗಾವಲು ಪಡೆಗೂ ತಿಳಿಸದೆ ಖಾಸಗಿ ವಾಹನವೇರಿ ಅವರು ಹೋಗಿದ್ದು ಎಲ್ಲಿಗೆ ಎಂಬುದು ಯಾರಿಗೂ ತಿಳಿದಿಲ್ಲ. ಯಡಿಯೂರಪ್ಪನವರ ಈ 'ನಡೆ' ತೀವ್ರ ಕುತೂಹಲ ಕೆರಳಿಸಿದೆ.
ಒಂದು ಮೂಲದ ಪ್ರಕಾರ ಬಂಧನದ ಭೀತಿಯಲ್ಲಿರುವ ಬಿಎಸ್‌ವೈ, ನಿರೀಕ್ಷಣಾ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದು ಇಂದು ವಿಚಾರಣೆಗೆ ಬರಲಿದೆ. ಆದರೆ ಅದಕ್ಕೂ ಮುನ್ನ ಸಿಬಿಐ, ಬಿಎಸ್‌ವೈ ಅವರನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಅರ್ಜಿ ವಿಚಾರಣೆ ಇತ್ಯರ್ಥವಾಗುವವರೆಗೂ ಸಿಬಿಐ ಕಣ್ಣಿಗೆ ಬೀಳದೆ, ಮುಜುಗುರ ತಪ್ಪಿಸಿಕೊಳ್ಳುವುದು ಯಡಿಯೂರಪ್ಪನವರ ಈ 'ನಡೆ'ಗೆ ಕಾರಣವಾಗಿದೆ ಎನ್ನಲಾಗಿದೆ.
ಇನ್ನೊಂದು ಆಪ್ತ ಮೂಲದ ಪ್ರಕಾರ ರಾಯರ ದಿನವಾದ ಇಂದು ರಾಘವೇಂದ್ರ ಸ್ವಾಮಿಗಳ ಪರಮಭಕ್ತ ಯಡಿಯೂರಪ್ಪ ಅವರು ರಾಯರ ಮಠಕ್ಕೆ ಹೋಗಿರುವ ಲಕ್ಷಣಗಳಿವೆ ಎನ್ನಲಾಗಿದೆ. ಗಮನಾರ್ಹವೆಂದರೆ ಈ ಹಿಂದೆ ಲೋಕಾಯುಕ್ತ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದಾಗ ಇದೇ ಯಡಿಯೂರಪ್ಪ ಅವರು ಸುಮಾರು 6 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ಕಣ್ಣಿಗೆ ಬೀಳದೆ ನಾಪತ್ತೆಯಾಗಿದ್ದರು. ಕೊನೆಗೆ ಸಂಜೆ ವೇಳೆಗೆ ಅನಿವಾರ್ಯವಾಗಿ ಕೋರ್ಟಿಗೆ ಬಂದು ಶರಣಾಗಿದ್ದರು.
ಈಗಲೂ ಅಷ್ಟೇ ಸಿಬಿಐ ತಮ್ಮ ಬೆನ್ನತ್ತಿ ಬಂದರೆ 'ಸೂಕ್ತ ಸಮಯ' ನೋಡಿಕೊಂಡು ನೇರವಾಗಿ ಕೋರ್ಟಿಗೆ ಹಾಜರಾಗುವಾ ಎಂಬ ಲೆಕ್ಕಾಚಾರವೂ ಯಡಿಯೂರಪ್ಪನವರ 'ಬೆಳಗಿನ ನಡೆಯಲ್ಲಿ' ಕಂಡುಬಂದಿದೆ.












Click it and Unblock the Notifications