ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ
ಆ ಗಂಡಸು ಥೇಟ್ ತನ್ನ ಗಂಡನಂತಯೇ ಇರಬೇಕು, ಗಂಡನಿಗಿಂದ ಎತ್ತರ ಇರದಿದ್ದರೂ ಪರವಾಗಿಲ್ಲ, ಗಂಡನಿಗಿಂತ ಕರ್ರಗೆ ಇರಬಾರದು, ಮೈಕಟ್ಟು ಹೀಗೇ ಇರಬೇಕು, ಆ ವ್ಯಕ್ತಿಗೆ ಯಾವುದೇ ರೋಗರುಜಿನಗಳು ಇರಬಾರದು, ಅತ್ಯಂತ ಆರೋಗ್ಯವಂತನಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬ್ರಾಹ್ಮಣನಾಗಿರಬೇಕು!
ತಕ್ಕಳ್ಳಪ್ಪ. ಈ ಬೇಡಿಕೆಗಳೆಲ್ಲ ಮದುವೆಯಾಗಲು ಸಿದ್ಧವಾಗಿರುವ ಬ್ರಾಹ್ಮಣ ವಧು ಅಥವಾ ಅವರ ಮನೆಯವರದಲ್ಲ. ವೀರ್ಯದ ಕೊರತೆಯಿಂದಾಗಿ ಮಡಿಲಲ್ಲಿ ಮಗುವನ್ನು ತುಂಬಿಕೊಳ್ಳಲು ಸಾಧ್ಯವಾಗದ, ಅಮ್ಮಂದಿರಾಗಲು ಕಾತುರದಿಂದಿರುವ ಮಹಿಳೆಯರನೇಕರ ಬೇಡಿಕೆಗಳು.
ಇವು ಮಗುವನ್ನು ಪಡೆಯಬಯಸುವ ದಂಪತಿಗಳ ಬೇಡಿಕೆಗಳಾದರೆ, ವೀರ್ಯ ದಾನ ಮಾಡಲು ಸಿದ್ಧರಾಗಿರುವ ವೀರರ ಕಥೆ ಏನು ಹೇಳೋಣ. ದಾನ ಮಾಡಿದ ವೀರ್ಯ ಪರೀಕ್ಷೆಗೊಳಗಾಗಬೇಕು, ಪರೀಕ್ಷೆ ಪಾಸಾದರೆ ಮೊಬೈಲ್ ಬಿಲ್ ಕಟ್ಟಲು ಪುಡಿಗಾಸು, ನಪಾಸಾದರೆ ಜೀವನಪರ್ಯಂತ ಕೀಳರಿಮೆ ಅನುಭವಿಸಬೇಕಾಗುತ್ತದೆ. [ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]

ಒಂದು ಘಟನೆಯಲ್ಲಿ, ವೀರ್ಯ ದಾನ ಮಾಡಿದ್ದು ಬಹಿರಂಗವಾಗಿ, ಗಂಡ ತನಗೆ ಮೋಸ ಮಾಡಿದ್ದಾನೆಂದು ಆರೋಪಿಸಿ ಹೆಂಡತಿ ಗಂಡನಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿತ್ತು. ಕೊನೆಗೆ ಅದರ ಹಿಂದಿನ ಮರ್ಮ ತಿಳಿದು, ಆಕೆ ಸಮಾಧಾನಗೊಂಡರೂ ಆ ವೀರ್ಯದಿಂದ ಹುಟ್ಟಿದ ಮಕ್ಕಳನ್ನೆಲ್ಲ ತಂದು ಸಾಕಿರಿ ಎಂಬ ಅಸಾಧ್ಯವಾದ ಬೇಡಿಕೆಯನ್ನು ಇಟ್ಟಿದ್ದಳು.
ಇನ್ನೂ ವಿಚಿತ್ರ ವಿಚಿತ್ರ ಬೇಡಿಕೆಗಳೂ ವೈದ್ಯರ ಬಳಿ ಬಂದಿವೆ. ಮಕ್ಕಳನ್ನು ಅಪೇಕ್ಷಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಗಳು, ವೀರ್ಯವಂತ 5 ಅಡಿ 10 ಅಂಗುಲವೇ ಎತ್ತರಿರಬೇಕು, ಬೆಳ್ಳಗಿರಬೇಕು, ಕಣ್ಣು ಕಂದು ಬಣ್ಣದ್ದಿರಬೇಕು ಮತ್ತು ನೋಡಲು ಗಂಡನಂತೆಯೇ ಕಾಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ ಅಂಥದೇ ವ್ಯಕ್ತಿಯನ್ನು ಹುಡುಕಿ ಆತನಿಂದ ವೀರ್ಯವನ್ನು ಪಡೆಯಲಾಯಿತು.
ಇಂತಹ ಬೇಡಿಕೆಗಳು ವೀರ್ಯ ದಾನ ಮಾಡುವವರನ್ನು ಮಾತ್ರವಲ್ಲ ವೀರ್ಯದ ಬ್ಯಾಂಕ್ ಸ್ಥಾಪಿಸಿರುವ ಸಂಸ್ಥೆಗಳನ್ನು ದ್ವಂದ್ವದಲ್ಲಿ ಸಿಲುಕಿಸಿವೆ. ದಾನ ಮಾಡುವವರ ಜಾತಿಯನ್ನು ಬಹಿರಂಗ ಪಡಿಸುವುದು ಅನೈತಿಕ, ಕಾನೂನಿಗೆ ವಿರುದ್ಧವಾಗಿದ್ದರೂ ದಾನ ಪಡೆಯುವವರು ಇಂತಹ ವಿವರಗಳನ್ನು ಗಂಟುಬಿದ್ದು ಕೇಳುತ್ತಾರೆ. ಕೆಲವರು ಐಐಟಿ ಮತ್ತು ಐಐಎಂನಲ್ಲಿ ಓದುತ್ತಿರುವ ವಿದ್ಯಾರ್ಥಿ ಅಥವಾ ಓದಿದ ವ್ಯಕ್ತಿಗಳ ವೀರ್ಯ ಬೇಡುತ್ತಾರಂತೆ.
ಇನ್ನೂ ಕೆಲವೊಬ್ಬರಿರುತ್ತಾರೆ. ವೀರ್ಯ ದಾನ ಮಾಡುವ ವ್ಯಕ್ತಿ ಪೇಜ್ 3ಗೆ ಸೂಕ್ತವಾದಂತಹ ವ್ಯಕ್ತಿಯಾಗಿರಬೇಕು. ಅವರ ರಕ್ತದ ಗುಂಪು ಇಂತಹುದೇ ಇರಬೇಕು ಅಂತ ಕೇಳುವವರು ಕೆಲವರಾದರೆ, ಜಾನ್ ಅಬ್ರಹಾಂ, ಇಮ್ರಾನ್ ಹಶ್ಮಿ, ಸಲ್ಮಾನ್ ಖಾನ್ ಮುಂತಾದವರ ಪಟ್ಟಿ ಹಿಡಿದುಕೊಂಡು ಬರುವವರು ಕೆಲವರು. ಇಂತಹ ವೀರ್ಯ ಪಡೆಯಲು ಎಷ್ಟು ಬೇಕಾದರೂ ದುಡ್ಡು ಬಿಸಾಕಲು ಅವರು ರೆಡಿಯಾಗಿರುತ್ತಾರೆ. ಇಂದು ವೀರ್ಯ ದಾನ ಮಾಡುವುದು ತಮಾಷೆ ಸಂಗತಿಯಾಗಿ ಉಳಿದಿಲ್ಲ.











Click it and Unblock the Notifications