ಸದಾ ಟಾರ್ಗೆಟ್ ಶೋಭಾ ಮೇಡಂ ಮಾತ್ರ ಅಲ್ಲ

ಯಡಿಯೂರಪ್ಪ ಬಣದ ಸಚಿವರಿಗೆ ಕೊಕ್ ಇಲ್ಲ ಎಂದು ಸದಾನಂದ ಗೌಡರು ಹೇಳಿದ್ದರು. ಆದರೆ, ನಿತಿನ್ ಗಡ್ಕರಿಗೆ ಪತ್ರ ಬರೆದು ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಕ್ಯಾಬಿನೆಟ್ ನ ಹಿರಿಯ ಸಚಿವರು ತಿರುಗಿ ಬಿದ್ದಿದ್ದಾರೆ. ಯಡಿಯೂರಪ್ಪ ಬಣದ ಸಚಿವರು ಸುಮಾರು 30 ಜನ ಸಹಿ ಇರುವ ಪತ್ರವನ್ನು ಹೈಕಮಾಂಡ್ ಗೆ ರವಾನಿಸಿ ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.
ಆದರೆ, ಇದರಿಂದ ಬೇಸರಗೊಂಡಿರುವ ಮುಖ್ಯಮಂತ್ರಿ ಸದಾನಂದ ಗೌಡ, ನಾನು ಯಾರ ವಿರುದ್ಧವೂ ಪತ್ರ ಬರೆದಿಲ್ಲ. ಹಾಗಂತ ಹೈಕಮಾಂಡ್ ಗೆ ಯಾರು ಬೇಕಾದರೂ ಪತ್ರ ಬರೆಯಬಹುದಾಗಿದೆ.
"It is an old issue being blown out of proportion. Anybody can write to party chief," ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳ ಪ್ರಶ್ನೆಗೆ ಸದಾ 'ಸ್ಮೈಲಿ' ಗೌಡರು ಉತ್ತರಿಸಿದ್ದಾರೆ.
ಅಸಲಿಗೆ, ಸದಾನಂದ ಗೌಡರ ಟಾರ್ಗೆಟ್ ಶೋಭಾ ಕರಂದ್ಲಾಜೆ ಮಾತ್ರ ಅಲ್ಲ ಎಂಬುದು ಸ್ಪಷ್ಟವಾಗಿದೆ. ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ, ಮುರುಗೇಶ್ ನಿರಾಣಿ, ಎಂಪಿ ರೇಣುಕಾಚಾರ್ಯ, ಉಮೇಶ್ ಕತ್ತಿ ಹಾಗೂ ರೇವೂ ನಾಯಕ ಬೆಳಮಗಿ ಅವರ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರೆಸಿ ಪತ್ರ ಕಳುಹಿಸಲಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಆರೋಪಿಸಿದ್ದಾರೆ.
ಆದರೆ, ಸದಾ ಕಳಿಸಿದ ಪತ್ರದ ವಿಷಯ ಲೀಕ್ ಆಗಿದ್ದು, ಈಗ ಭಾರಿ ಗದ್ದಲಕ್ಕೆ ದಾರಿಯಾಗಿದೆ. ಯಡಿಯೂರಪ್ಪ ಬೆಂಬಲಿಗರು ಶಾಸಕಾಂಗ ಸಭೆಗೆ ಆಗ್ರಹಿಸಿ ಬರೆದಿರುವ ಪತ್ರ ನನಗೆ ತಲುಪಿಲ್ಲ ಎನ್ನುವ ಮೂಲಕ ಸದಾನಂದ ಗೌಡರು ಹೊಸ ತಿರುವು ನೀಡಿದ್ದಾರೆ. ಒಟ್ಟಿನಲ್ಲಿ ಪತ್ರ ಚಳವಳಿ ಎಲ್ಲಿಗೆ ಮುಟ್ಟುವುದೋ ಯಾರಿಗೆ ತಟ್ಟುವುದೋ ಗೊತ್ತಿಲ್ಲ.












Click it and Unblock the Notifications