ನನ್ನ ವಿರುದ್ಧ ನಿರಂತರ ಷಡ್ಯಂತ್ರ: ಶೋಭಾ

'ಪಕ್ಷದಲ್ಲಿ ಮೀರ್ ಸಾದಿಕ್ ಗಳಿದ್ದಾರೆ' ಎಂದು ಶೋಭಾ 2 ತಿಂಗಳ ಹಿಂದೆ ಗುಡುಗಿದ್ದನ್ನು ನೆಪವಾಗಿಸಿಕೊಂಡು 'ಶೋಭಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ' ಎಂದು ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರುಗಳು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ಪತ್ರ ಬರೆದಿದ್ದರು. ಪತ್ರ ಬಹಿರಂಗವಾಗುತ್ತಿದ್ದಂತೆ ಆತಂಕಕ್ಕೊಳಗಾದ ಶೋಭಾ ಕರಂದ್ಲಾಜೆ ಅವರು ದೆಹಲಿ ತಲುಪಿಕೊಂಡಿದ್ದು, ವರಿಷ್ಠರ ಮುಂದೆ ತಮ್ಮ ಅಹವಾಲು ಮಂಡಿಸಿದ್ದಾರೆ.
'ತಾನು ಮೀರ್ ಸದಿಕ್ ಎಂದಿದ್ದು ಯಾರಿಗೆ ಎಂಬುದು ಆಯಾ ಮೀರ್ ಸಾದಿಕ್ ಗಳಿಗೆ ಚೆನ್ನಾಗಿ ಅರ್ಥವಾಗಿದೆ. ಈ ಸಂದರ್ಭದಲ್ಲಿ ಆ ಮಾತುಗಳನ್ನು ತಮಗೇ ಹೇಳಿದ್ದಾರೆ ಎಂದು ಬೇರೆ ಯಾರಾದರೂ ಅರ್ಥೈಸಿಕೊಂಡರೆ ನಾನೇನು ಮಾಡಲಿ. ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರಿಗೆ ಇದು ಅರ್ಥವಾಗುತ್ತದೆ ಎಂಬುದು ನನ್ನ ನಂಬಿಕೆ' ಎಂದು ಶೋಭಾ ಸುದ್ದಿಗಾರರಿಗೆ ತಿಳಿಸಿದರು.
ಪತ್ರದ ಹಿನ್ನೆಲೆಯಲ್ಲಿ 'ಈ ಹಿಂದೆ ಒಮ್ಮೆ ರಾಜೀನಾಮೆ ಕೊಟ್ಟು ಅನುಭವವಾಗಿದೆ. ಆದ್ದರಿಂದ ಪರಿಸ್ಥಿತಿ ಬಯಸಿದರೆ ಮತ್ತೆ ರಾಜೀನಾಮೆ ಕೊಡಲು ಹಿಂಜರಿಯುವುದಿಲ್ಲ' ಎಂದೂ ಶೋಭಾ ಇದೇ ವೇಳೆ ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ಬಳಿಕ ಸಚಿವೆ ಶೋಭಾ ಅವರು ತಮ್ಮ ಕುಟುಂಬ ಸದಸ್ಯರ ಜತೆ ಆಗ್ರಾಗೆ ತೆರಳಿದರು,. ನಾಳೆ ಶುಕ್ರವಾರ ಹರಿದ್ವಾರಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕ ಶನಿವಾರ ಬೆಂಗಳೂರಿಗೆ ವಾಪಸಗಾಲಿದ್ದಾರೆ.












Click it and Unblock the Notifications