ತೆರಿಗೆ ವಾಪಸ್: ಚಿನ್ನದ ಬೆಲೆ ಇನ್ನಷ್ಟು ಕುಸಿಯಲಿದೆ

ಚಿನ್ನದ ಬೆಲೆ ಇನ್ನಷ್ಟು ಕುಸಿಯಲಿದೆ: ಮೊನ್ನೆಯ ಬಜೆಟಿನಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಏಕಾಏಕಿ ತೆರಿಗೆ ಹೆಚ್ಚಿಸಿ, ಖರೀದಿ ಪ್ರಕ್ರಿಯೆಯನ್ನು ಒಂದಷ್ಟು ಕಠಿಣಗೊಳಿಸಿದ್ದರು. ಇದರಿಂದ ಕಂಗಾಲಾದ ಆಭರಣ ಮಾರಾಟಗಾರರು ಮೊಟ್ಟಮೊದಲ ಬಾರಿಗೆ ದೇಶ್ಯಾದ್ಯಂತ 21 ದಿನಗಳ ಕಾಲ ವ್ಯಾಪಾರ ಸ್ಥಗಿತಗೊಳಿಸಿ, ಸಾವಿರಾರು ಕೋಟಿ ರು ನಷ್ಟ ಮಾಡಿಕೊಂಡಿದ್ದರು. ಆದರೆ ಪ್ರಣಬ್ ದಾ ಇವರಿಗೆ ಕೊಂಚ ರಿಲೀಫ್ ನೀಡಿದ್ದಾರೆ. ಫುಲ್ ಖುಷ್ ಆಗಿರುವ ಮಾರಾಟಗಾರರ ಅದರ ಫಲವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ.
ಅರ್ಥಾತ್ ಚಿನ್ನದ ಬೆಲೆ ಇಳಿಯಲಿದೆ. ಅಕ್ಷಯ ತೃತೀಯಾ ಬಳಿಕ ಸಾರ್ವಕಾಲಿಕ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ 10 ಗ್ರಾಂ.ಗೆ 30 ಸಾವಿರದಿಂದ ಕೆಳಗಿಳಿದು 29,000 ರು. ಆಸುಪಾಸಿನಲ್ಲಿ ಹಾರಾಡುತ್ತಿದೆ. ಮಂಗಳವಾರ ದಿನದ ಆರಂಭ್ಕೆ ಚಿನ್ನದ ಬೆಲೆ 29,090 ರೂ. ನಷ್ಟಿದೆ. ಅದು ಇನ್ನೂ ಕೆಳಗಿಳಿಯುವ ಲಕ್ಷಣಗಳಿವೆ.
ಅಂತಾರಾಷ್ಟ್ರೀಯ ಸ್ತರದಲ್ಲಿ ಚಿನ್ನವನ್ನು ಹೂಡಿಕೆಯ ಸರಕಾಗಿ ಪರಿಗಣಿಸಿದ್ದ ಯುರೋಪ್ ಮಂದಿ ಈಗ ಚಿನ್ನದಿಂದ ವಿಮುಖಗೊಂಡಿದ್ದಾರೆ. ಇದರಿಂದ ಚಿನ್ನದ ಬೆಲೆ ಇನ್ನಷ್ಟು ಕುಸಿಯುವ ಲೆಕ್ಕಾಚಾರವಿದೆ. ಆದರೆ ಆಷಾಢ ಕಳೆದು ಶ್ರಾವಣ ಮದುವೆ ಮಾಸ ಆರಂಭವಾಗುತ್ತಿದ್ದಂತೆ ಖಂಡಿತ ಮತ್ತೆ ಚಿನ್ನ ಗಗನ ತಲುಪಲಿದೆ. ಆದ್ದರಿಂದ ಖರೀದಿಗೆ ಈಗ ಸಕಾಲ.
ಇನ್ನು 2 ಲಕ್ಷ ರೂ. ಗಿಂತ ಹೆಚ್ಚಿನ ಚಿನ್ನ ಖರೀದಿಸಿದರೆ PAN ಕಡ್ಡಾಯ ಮತ್ತು ಖರೀದಿ ಹಂತದಲ್ಲೇ ತೆರಿಗೆ ಒಪ್ಪಿಸಬೇಕು ಎಂದು ಬಜೆಟ್ಟಿನಲ್ಲಿ ತಿಳಿಸಲಾಗಿತ್ತು. ಅದನ್ನು ಈಗ ವಾಪಸ್ ತೆಗೆದುಕೊಳ್ಳಲಾಗಿದ್ದು, 5 ಲಕ್ಷ ರು. ಗಿಂತ ಹೆಚ್ಚಿನ ಚಿನ್ನಾಭರಣ (ಗಟ್ಟಿ ಚಿನ್ನ ಅಲ್ಲ) ಖರೀದಿ ಮಾಡಿದರೆ ಮಾತ್ರ ತೆರಿಗೆ ಪಾವತಿಸಬೇಕು ಎಂದು ಕೇಂದ್ರ ವಿತ್ತ ಸಚಿವರು ಹೇಳಿದ್ದಾರೆ.
ಕೇಂದ್ರವು ಬಜೆಟ್ಟಿನಲ್ಲಿ ಚಿನ್ನದ ವ್ಯಾಪಾರಿಗಳ ಮೇಲೆ ಗದಾಪ್ರಹಾರ ನಡೆಸಿತ್ತು. ಅಂದಿನಿಂದ ನಾವು ನಿದ್ರಾಹಾರ ಕಳೆದುಕೊಂಡಿದ್ದೆವು. ಆದರೆ ಈಗ ನೆಮ್ಮದಿಯಾಗಿ ಅಂಗಡಿಗಳನ್ನು ತೆರೆದು ಗ್ರಾಹಕರನ್ನು ಸ್ವಾಗತಿಸುತ್ತೇವೆ ಎಂದು ಮಾರಾಟಗಾರರು ಸಂತಸ ವ್ಯಪ್ತಪಡಿಸಿದ್ದಾರೆ.












Click it and Unblock the Notifications