ಬರ: ಕೇಂದ್ರ ಸಚಿವರ ಭೇಟಿ, ಪ್ರಧಾನಿ ಕಚೇರಿಯತ್ತ ಹೆಜ್ಜೆ

ನಿಯೋಗವು ಬೆಳಗ್ಗೆ ರಾಜ್ಯದ ಸಂಸದರ ಜತೆಗೆ ಉಪಹಾರ ಕೂಟ ನಡೆಸಿತು. ಆ ಸಂದರ್ಭದಲ್ಲಿ ಕೇಂದ್ರದ ಮೇಲೆ ಬರ ಪರಿಹಾರಕ್ಕಾಗಿ ಒತ್ತಡ ಹಾಕುವ ಸಂಬಂಧ ಸವಿಸ್ತಾರ ಚರ್ಚೆಗಳು ನಡೆದವು. ಅದಾದ ನಂತರ, ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ನಿಯೋಗ ಭೇಟಿ ಮಾಡಿತು. ಈ ಸಂದರ್ಭದಲ್ಲಿ ನಿಯೋಗವು ಕೇಂದ್ರದಿಂದ ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿತು.
ಬರ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಭಾಗಗಳಿಗೆ ನೆರವಾಗಲು ಮತ್ತು ಪುನರ್ವಸತಿಗಾಗಿ ಕೇಂದ್ರ ಸರಕಾರ ಸಕಲ ನೆರವು ಘೋಷಿಸಬೇಕು ಎಂದು ನಿಯೋಗವು ಶರದ್ ಪವಾರ್ ಅವರನ್ನು ಆಗ್ರಹಿಸಿತು. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಕರ್ನಾಟಕಕ್ಕೆ ಎಲ್ಲ ನೆರವು ದೊರಕಿಸಿಕೊಡಲು ಶ್ರಮಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಈ ಮಧ್ಯೆ, ಮಧ್ಯಾಹ್ನದ ವೇಳೆಗೆ ಪ್ರಣಬ್ ಮುಖರ್ಜಿ ಅವರನ್ನೂ ಭೇಟಿ ಮಾಡಿ, ಕರ್ನಾಟಕದ ವತಿಯಿಂದ ಅಹವಾಲು ಸಲ್ಲಿಸಿತು. ಆದರೆ ಪ್ರಣಬ್ ಅವರಿಂದ ಯಾವುದೇ ನೆರವಿನ ಭರವಸೆ ಸಿಗಲಿಲ್ಲ. ಭೇಟಿ ಶೂನ್ಯ ಸಂಪಾದನೆಯಾಯಿತು. ಸಭೆಯಲ್ಲಿ ಕೇಂದ್ರ ಸಚಿವರಾದ ಕರ್ನಾಟಕದ ಖರ್ಗೆ ಮತ್ತು ಮುನಿಯಪ್ಪ ಅವರು ಮೌನಕ್ಕೆ ಶರಣಾಗಿದ್ದರು ಎಂದು ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ.
ಸಂಜೆ ಪ್ರಧಾನಿ ಜತೆ ನಿಯೋಗ: ಪ್ರಧಾನಿ ಭೇಟಿಗೂ ಮುನ್ನ ಪೂರ್ವಭಾವಿಯಾಗಿ ಕೇಂದ್ರದ ಕೃಷಿ ಮತ್ತು ಹಣಕಾಸು ಸಚಿವರನ್ನು ಭೇಟಿ ಮಾಡಿದ ತಂಡ ಇದೀಗ ಸಂಜೆ ವೇಳೆಗೆ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಗೆ ಸಜ್ಜಾಗಿದೆ. ಅಲ್ಲಿ ಸವಿಸ್ತಾರ ಚರ್ಚೆಗಳು ಆಶಯವಿದೆ. ಆದ್ದರಿಂದ ಪ್ರಧಾನಿ ಭೇಟಿಗೆ ಹೆಚ್ಚಿನ ಮಹತ್ವವಿದ್ದು, ಕರ್ನಾಟಕದ ಬರ ಪರಿಹಾರಕ್ಕೆ ಕೇಂದ್ರದ ನೆರವು ಪ್ಯಾಕೇಜ್ ಯಾವ ಪ್ರಮಾಣದಲ್ಲಿರುತ್ತದೆ ಎಂಬುದರತ್ತ ಇಡೀ ಕರ್ನಾಟಕ ದೃಷ್ಟಿನೆಟ್ಟಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ರೇವಣ್ಣ, ಮಾಜಿ ಮುಖ್ಯಮಂತ್ರಿ, ಸಂಸದ ಧರಂ ಸಿಂಗ್, ರಮೇಶ್ ಜಿಗಜಿಣಗಿ, ಆರ್ ಧೃವನಾರಾಯಣ್ ಹಾಗೂ ಸಚಿವರಾದ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ನಿಯೋಗದಲ್ಲಿದ್ದರು.












Click it and Unblock the Notifications