ವಿದ್ಯಾರ್ಥಿನಿಯರಿಗೆ ಕಂಟಕವಾಗಿದ್ದ ಯುವಕನ ಸೆರೆ

ಬಂಧಿತ ಆರೋಪಿ ದೋಬಿ ಬೀದಿಯ ನಿವಾಸಿ ರಾಜೇಶ್ (24) ಇಲ್ಲಿನ ರಾವ್‌ಬಹದ್ದೂರ್ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ರಸ್ತೆ, ವೀರಶೈವ ಕಾಲೇಜು ರಸ್ತೆ, ವಿಮ್ಸ್ ಆಟದ ಮೈದಾನದ ಪಕ್ಕದ ರಸ್ತೆಗಳಲ್ಲಿ ಓಡಾಡುವ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ.
ಕಳೆದ 2 ತಿಂಗಳಲ್ಲಿ ಹತ್ತಾರು ವಿದ್ಯಾರ್ಥಿನಿಯರ ಮೇಲೆ ರಾಜೇಶ ಹೀಗೆ ದಾಳಿ ಮಾಡಿದ್ದ. ಇದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿನಿಯರು ಆ ರಸ್ತೆಗಳಲ್ಲಿ ಓಡಾಡುವುದನ್ನೇ ನಿಲ್ಲಿಸಿದ್ದರು. ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯನ್ನೂ ರಾಜೇಶ ಇರಿದಿದ್ದ. ಇವನ ದಾಳಿಗೆ ಸಿಲುಕಿ ಮೂರ್ಛೆ ಹೋಗಿದ್ದ ಯುವತಿಯೊಬ್ಬಳು ಚಿಕಿತ್ಸೆ ಪಡೆದ ನಂತರ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಿದ್ದಳು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ: ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಮಂಗಳವಾರ ರಾತ್ರಿ 8 ರ ವೇಳೆ ರಾಜೇಶ ಯುವತಿಯೊಬ್ಬಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾಗ, ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಇನ್‌ಸ್ಪೆಕ್ಟರ್ ವೈ.ಡಿ. ಅಗಸೀಮನಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದರು. ಯುವತಿಯರ ಮೇಲೆ ತಾನು ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿರುವ ರಾಜೇಶನನ್ನು ನ್ಯಾಯಾಂಗ ವಶಕ್ಕೆ ಸಲ್ಲಿಸಲಾಗಿದೆ.
ಯುವತಿಯರ ಮೇಲೆ ದಾಳಿ ನಡೆಸಿದರೂ ಅವರಿಂದ ಬೆಲೆ ಬಾಳುವ ವಸ್ತುಗಳನ್ನು ಅಪಹರಿಸಿಲ್ಲ. ಅಲ್ಲದೆ, ಯಾರ ಮೇಲೂ ಅತ್ಯಾಚಾರಕ್ಕೂ ಯತ್ನಿಸಿಲ್ಲ. ಮಾನಸಿಕ ಅಸ್ವಸ್ಥತೆಯಿಂದಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications