ನ್ಯಾ ಚಂದ್ರಶೇಖರಯ್ಯ ಯಾರ ಕ್ಯಾಂಡಿಡೇಟು ಗೌಡರೇ?

ಇದೇ ವೇಳೆ, ತಮ್ಮ ನೇಮಕ ರದ್ದು ಬಗ್ಗೆ 'ದಿಗ್ಭ್ರಮೆ' ವ್ಯಕ್ತಪಡಿಸಿರುವ ನ್ಯಾ. ಚಂದ್ರಶೇಖರಯ್ಯ ತಮ್ಮ 77 ದಿನಗಳ ಕಾರ್ಯಾವಧಿಯಲ್ಲಿ 863 ಪ್ರಕರಣಗಳನ್ನು ಇತ್ಯರ್ಥಪಡಿಸಿದ ಸಮಾಧಾನದೊಂದಿಗೆ ಸ್ಥಾನ ತ್ಯಜಿಸಿದ್ದಾರೆ. ಆದರೆ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಹೋಗಿದ್ದಾರೆ.
ನ್ಯಾ ಚಂದ್ರಶೇಖರಯ್ಯ ಅವರಿಗೆ allmost doors closed ಎಂಬ ಪರಿಸ್ಥಿತಿ ಎದುರಾಗಿರುವಾಗ... ಅಸಲಿಗೆ ಚಂದ್ರಶೇಖರಯ್ಯ ಯಾರ ಕ್ಯಾಂಡಿಡೇಟು ಎಂಬ ಪ್ರಶ್ನೆ ಕಾಡತೊಡಗಿದೆ. ಇದಕ್ಕೆ ಉತ್ತರ ನೀಡಬಹುದಾದವರೆಂದರೆ ಗೌಡರು. ಅದು ದೇವೇಗೌಡರಾದರೂ ಆಗಬಹುದು ಅಥವಾ ನಮ್ಮ ಸದಾನಂದ ಗೌಡರಾದರೂ ಆಗಬಹುದು.
ಏಕೆಂದರೆ ದೇವೇಗೌಡರ ಆಜ್ಞಾನುವರ್ತಿಯಾಗಿ ಸದಾನಂದರು ಆತುರಾತುರವಾಗಿ ನ್ಯಾ ಚಂದ್ರಶೇಖರಯ್ಯ ಅವರನ್ನು ಎರಡನೇ ಉಪ ಲೋಕಾಯುಕ್ತ ಕುರ್ಚಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಮಾತಿದೆ. ಅಷ್ಟಕ್ಕೂ ಚಂದ್ರಶೇಖರಯ್ಯ ಬೇರೆ ಯಾರೂ ಅಲ್ಲ ಹಾಲಿ ಜನತಾದಳದ ಶಾಸಕರೊಬ್ಬರ ಸಮೀಪ ಬಂಧು. ಚಂದ್ರಶೇಖರಯ್ಯ ನೇಮಕವಾದಾಗ ವಿಧಾನಮಂಡಲ ಅಧಿವೇಶನವೂ ನಡೆಯುತ್ತಿತ್ತು ಎಂಬುದು ಗಮನಾರ್ಹ. ಆಗ ಜೆಡಿಎಸ್ ನ ಆ ಶಾಸಕ ಮಹಾಶಯರನ್ನು ಎದುರುಗೊಂಡ ಕಾಂಗ್ರೆಸ್ಸಿನ ಹಿರಿಯ ಶಾಸಕರೊಬ್ಬರು ಕೊನೆಗೂ ನಿಮ್ಮವರೇ ಲೋಕಾಯುಕ್ತರಾದರಲ್ಲ ಅಂತ ಛೇಡಿಸಿದಾಗ, ಸುಮ್ನಿರು ಮಾರಾಯ. ಇಲ್ಲೆಲ್ಲ ಪ್ರೆಸ್ ನವರಿದ್ದಾರೆ. ಕೇಳಿಸಿಕೊಂಡರೆ ಅಷ್ಟಕಷ್ಟ ಅಂತ ಅಲವತ್ತುಕೊಂಡಿದ್ದರು.
ನ್ಯಾ. ಚಂದ್ರಶೇಖರಯ್ಯ ನೇಮಕ ರದ್ದುಗೊಳಿಸಿ, ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ನಡೆದ ವಿದ್ಯಮಾನಗಳೂ ಕುತೂಹಲಕಾರಿಯಾಗಿವೆ. ಇಲ್ಲಿ ಒಂದು ಗಮನಾರ್ಹ ಸಂಗತಿಯೆಂದರೆ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿ, ದೊಡ್ಡಗೌಡರಿಗೆ ಮಣೆ ಹಾಕಿ ನ್ಯಾ. ಚಂದ್ರಶೇಖರಯ್ಯ ನೇಮಕ ಮಾಡಲಾಗಿತ್ತು. ಚಂದ್ರಶೇಖರಯ್ಯ ಅವರನ್ನು ನೇಮಿಸುವುದಕ್ಕೆ ಯಡಿಯೂರಪ್ಪನವರಿಗೆ ಸುತರಾಂ ಇಷ್ಟವಿರಲಿಲ್ಲ.
ಅದಾಗತಾನೇ ನಾಯಕತ್ವ ಕಿತ್ತಾಟ ತಾರಕಕ್ಕೆ ಏರಿತ್ತು. ಸದಾನಂದರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೋರ್ ಕಮಿಟಿಯಲ್ಲಿ ಚರ್ಚಿಸಿ, ಯಡಿಯೂರಪ್ಪನವರ ಗಮನಕ್ಕೆ ತರಬೇಕು ಎಂದು ಹೈಕಮಾಂಡ್ ಸದಾನಂದರಿಗೆ ಸೂಚಿಸಿತ್ತು. ಆದರೆ ಸದಾನಂದರು ಅದನ್ನೂ ಪಾಲಿಸಲಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು 1 ನೇ ಉಪಲೋಕಾಯುಕ್ತ ಮಜ್ಜಗೆ ಎದುರು ಇದೇ ನ್ಯಾ ಚಂದ್ರಶೇಖರಯ್ಯ ಅವರು ಪಟ್ಟು ಹಿಡಿದಿದ್ದರು ಎಂಬುದನ್ನು ಸುಮ್ಮನೆ ಹಾಗೇ ಇಲ್ಲಿ ಜ್ಞಾಪಕಕ್ಕೆ ತರಿಸಿಕೊಳ್ಳಬಹುದು.
ಹಿನ್ನೆಲೆ ಹೀಗಿರುವಾಗ, ಮೊನ್ನೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, ಕೊತಕೊತನೆ ಕುದಿಯುತ್ತಿದ್ದ ಯಡಿಯೂರಪ್ಪ ಮುಖದಲ್ಲಿ ಮಂದಹಾಸ ಮೂಡಿದೆ. ಹಾಗೆಂದೇ, ರೇಣುಕಾಚಾರ್ಯ ಮತ್ತವರ ಪಟಾಲಂ ರೇಸ್ ಕೋರ್ಸ್ ರಸ್ತೆಗೆ ಓಡೋಡಿ ಬಂದು ಯಡಿಯೂರಪ್ಪನವರನ್ನು ಕಂಗ್ರಾಜುಲೇಟ್ ಮಾಡಿದ್ದು.
ಹೀಗೆ, ರೇಸ್ ಕೋರ್ಸ್ ರಸ್ತೆಯಲ್ಲಿ ಹಬ್ಬ ಆಚರಿಸುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಕಿವಿಗೆ ಬಿದ್ದಿದ್ದೇ ತಡ, ಅವಕಾಶ ಸಿಕ್ಕಿದಾಗಲೆಲ್ಲ ಯಡಿಯೂರಪ್ಪನವರನ್ನು ಬಡಿದುಬಿಸಾಕಬೇಕು ಎಂಬ ಉಮೇದಿಯಲ್ಲಿರುವ ಸದಾನಂದರು ಅದನ್ನು ಕಾರ್ಯಗತಗೊಳಿಸಲು ಸೆಟೆದು ನಿಂತರು. ಆಗ ಅವರ ಕಣ್ಣಿಗೆ ಬಿದ್ದಿದ್ದು (ಸಾರಿ, ಹತ್ತಾರು ದಿನಗಳಿಂದ ಅವರ ಕಣ್ಣಿಗೆ ಬೀಳುತ್ತಿಲ್ಲ ಅಂತ!) ಮಾಧ್ಯಮ ಸಲಹೆಗಾರ R P Jagadish. ಆರ್ಪಿ ಗೆ ಗೇಟ್ ಪಾಸ್ ನೀಡಿಯೇ ಬಿಟ್ಟರು.












Click it and Unblock the Notifications