ಡಿವಿಎಸ್: ಮುಂದಿನ ವಿಕೆಟ್ ಧನಂಜಯ ಕುಮಾರ್

ಆ ವಿಕೆಟ್ ದೇಶದ ರಾಜಧಾನಿಯಲ್ಲಿ ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ಆಡುತ್ತಲೇ ಇರುತ್ತದೆ. ಸಾಲದು ಅಂತ ಶೋಭಾ ಮೇಡಂ ದಿಲ್ಲಿಗೆ ತಲುಪಿಕೊಂಡರೆ ಆ ವಿಕೆಟ್ ಮತ್ತಷ್ಟು ಬಲವಾಗಿ ಬೇರೂರಿ, ಮೇಡಂ ಮುಂದೆ ಮಂಡಿಯೂರುತ್ತದೆ. ಇದು ಮಾಹಿ ಸಂಸದ ಸದಾನಂದರಿಗೆ ಗೊತ್ತಿಲ್ಲ ಅಂತೇನೂ ಅಲ್ಲ. ಆದರೆ ಅವಕಾಶಕ್ಕಾಗಿ ಹೊಂಚುಹಾಕುತ್ತಿದ್ದಾರೆ. ಅಂತಲೇ, ನಿನ್ನೆ ಗುಟುರು ಹಾಕಿದ್ದಾರೆ. ಇಷ್ಟಕ್ಕೂ ಯಾರಪ್ಪ ಆ ವಿಕೆಟ್ ಅಂದರೆ ನಮ್ಮ ದಿಲ್ಲಿ ದೊರೆ, ಯಡಿಯೂರಪ್ಪನವರ ಕಟ್ಟಾಳು ಧನಂಜಯಕುಮಾರ್!
'ಸದಾ'ಶಯ: ಗುರುವಾರ ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಬರ ಪರಿಹಾರ ಕಾರ್ಯಕ್ಕೆ ಹೆಚ್ಚಿನ ನೆರವು ಅಗತ್ಯವಿದ್ದು, ಸರಕಾರ ಒತ್ತಡ ಹೇರುವಲ್ಲಿ ವಿಳಂಬ ಮಾಡಿದೆ ಎಂದು ಪರೋಕ್ಷವಾಗಿ ಧನಂಜಯಗೆ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಬರಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ 2600 ಕೋಟಿ ರೂಪಾಯಿ ನೆರವು ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದೆಹಲಿಯಲ್ಲಿರುವ ಕರ್ನಾಟಕದ ವಿಶೇಷ ಪ್ರತಿನಿಧಿ ವಿ. ಧನಂಜಯ ಕುಮಾರ್ ಅವರು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ನೆರವು ಕೊಡಿಸಲು ಮುಂದಾಗಬೇಕು ಎಂದು 'ಸದಾ'ಶಯ ವ್ಯಕ್ತಪಡಿಸಿದ್ದಾರೆ.
ಬರ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ಹಣ ಬಿಡುಗಡೆ ಮಾಡಿಸಲು ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದ ಸದಾನಂದಗೌಡ, ಈ ಬಗ್ಗೆ ಅವರಿಗೆ ಸೂಚನೆ ನೀಡಲಾಗುವುದು ಎಂದೂ ಸೂಕ್ಷ್ಮವಾಗಿ ಹೇಳಿದರು.












Click it and Unblock the Notifications