ವೈಎಸ್‌ಆರ್ ಕಾಲದಲ್ಲಿ ರೆಡ್ಡಿಗೆ 3800 ಎಕರೆ ಗಿಫ್ಟ್: CAG

2004ರಿಂದ 2011ರ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಸರ್ಕಾರಿ ಭೂಮಿ ಹಂಚಿಕೆಯಲ್ಲಿ ನಡೆದ ಭಾರಿ ಅವ್ಯವಹಾರವನ್ನು ಮಹಾಲೇಖಪಾಲರು ಪತ್ತೆಹಚ್ಚಿದ್ದಾರೆ. ಅದರಲ್ಲಿ ಜನಾರ್ದನ ರೆಡ್ಡಿ ಒಡೆತನದ ಕಂಪನಿಗಳಿಗೆ ನೀಡಿದ ಭೂಮಿಯ ಪ್ರಮಾಣವೇ ಹೆಚ್ಚು. ಅದರಲ್ಲೂ 2004-09ರ ಅವಧಿಯಲ್ಲಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಬಹುಪಾಲು ಅಕ್ರಮಗಳು ನಡೆದಿವೆ. ಅದರ ಮೊತ್ತ ಸುಮಾರು 1784 ಕೋಟಿ ರೂ. ಆಗುತ್ತದೆ ಎಂದು ವರದಿ ಅಂದಾಜಿಸಿದೆ.
ಉಕ್ಕಿನ ಕಾರ್ಖಾನೆ ನಿರ್ಮಿಸಲು ಹಾಗೂ ವಿಮಾನ ನಿಲ್ದಾಣ ಮತ್ತು ಫ್ಲೈಯಿಂಗ್ ಅಕಾಡೆಮಿ ಆರಂಭಿಸಲು ರೆಡ್ಡಿ ಮಾಲೀಕತ್ವದ ಬ್ರಹ್ಮಿಣಿ ಇಂಡಸ್ಟ್ರೀಸ್‌ಗೆ ಸಾವಿರಾರು ಎಕರೆ ಭೂಮಿಯನ್ನು ವೈಎಸ್‌ಆರ್ ಸರ್ಕಾರ ಅಕ್ರಮವಾಗಿ ನೀಡಿತ್ತು.
ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದಲ್ಲಿ ಬ್ರಹ್ಮಿಣಿ ಇಂಡಸ್ಟ್ರೀಸ್ ವತಿಯಿಂದ ವಿಮಾನ ನಿಲ್ದಾಣ ಹಾಗೂ ಫ್ಲೈಯಿಂಗ್ ಅಕಾಡೆಮಿ ಆರಂಭಿಸಲು ಜನಾರ್ದನ ರೆಡ್ಡಿ ಆಂಧ್ರ ಸರ್ಕಾರದಿಂದ 3115.64 ಎಕರೆ ಮಂಜೂರು ಮಾಡಿಸಿಕೊಂಡಿದ್ದಾರೆ. ಈ ವ್ಯವಹಾರ ವಿಮಾನ ನಿಲ್ದಾಣ ನಿರ್ಮಿಸಲು ಯಾವ ರೀತಿಯ ಜಾಗ ಆಯ್ದುಕೊಳ್ಳಬೇಕು ಎಂಬುದರ ಸಂಬಂಧ ಭಾರತ ಸರ್ಕಾರದ ನಿಯಮಾವಳಿಯನ್ನು ಉಲ್ಲಂಘಿಸುತ್ತದೆ. ಈ ಜಾಗದಿಂದ ಕಡಪ ವಿಮಾನ ನಿಲ್ದಾಣ ಕೇವಲ 50 ಕಿ.ಮೀ ದೂರದಲ್ಲಿದೆ. ಇಷ್ಟು ಸಮೀಪದಲ್ಲಿ ಮತ್ತೂಂದು ವಿಮಾನ ನಿಲ್ದಾಣ ಆರಂಭಿಸುವ ಅಗತ್ಯವಿಲ್ಲ.
ಒಂದು ವೇಳೆ ವಿಮಾನನಿಲ್ದಾಣ ನಿರ್ಮಿಸುವುದು ಕಾನೂನು ಬದ್ಧವಾಗಿದ್ದರೂ ಅದಕ್ಕೆ ಬೇಕಾದ ಜಾಗ 2500 ಎಕರೆ ಮಾತ್ರ. ಆದರೆ, ಹೆಚ್ಚುವರಿಯಾಗಿ 615 ಎಕರೆ ಮಂಜೂರು ಮಾಡಲಾಗಿದೆ. ಈ ವ್ಯವಹಾರ ಕಾನೂನುಬದ್ಧವಾಗಿಲ್ಲ ಎಂದು ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ವೈಎಸ್‌ಆರ್ ಸಂಪುಟ ಭೂಮಿ ಹಂಚಿಕೆಗೆ ಅನುಮೋದನೆ ನೀಡಿತು.
ಇಷ್ಟಕ್ಕೇ ನಿಲ್ಲದ ಆಂಧ್ರ ಸರ್ಕಾರ ಇದೇ ಜಮ್ಮಲಮಡುಗು ಮಂಡಲದಲ್ಲಿ ಬ್ರಹ್ಮಿಣಿ ಇಂಡಸ್ಟ್ರೀಸ್‌ಗೆ ಉಕ್ಕಿನ ಕಾರ್ಖಾನೆ ನಿರ್ಮಿಸಲು 10,760.66 ಎಕರೆ ಭೂಮಿ ನೀಡಿದೆ. ಇದರಲ್ಲಿ 674.58 ಎಕರೆ ಭೂಮಿ ನೀಡಿಕೆ ಅಕ್ರಮವಾಗಿದೆ. ಈ ಜಾಗದಲ್ಲಿ ಜಲಮೂಲಗಳಿವೆ. ಜೊತೆಗೆ ಉಕ್ಕಿನ ಕಾರ್ಖಾನೆಗೆ ಗಂಡಿಕೋಟಾ ಜಲಾಶಯದಿಂದ ಪರಿಸರ ಇಲಾಖೆಯ ಅನುಮತಿಯಿಲ್ಲದೆ 2 ಟಿಎಂಸಿ ನೀರು ನೀಡಲು ಒಪ್ಪಿಗೆ ನೀಡಲಾಗಿದೆ. ಕಾರ್ಖಾನೆಯ ಮೊದಲ ಹಂತದ ಕೆಲಸ ಆರಂಭವಾಗುವುದಕ್ಕೂ ಮುನ್ನವೇ ಈ ಎಲ್ಲ ಸೌಕರ್ಯ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಓಬಳಾಪುರಂ ಮೈನಿಂಗ್ ಕಂಪನಿಗೂ ವೈಎಸ್‌ಆರ್ ಅಕ್ರಮವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ. ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆಗೆ ಈ ಕಂಪನಿ 413 ಎಕರೆ ಭೂಮಿ ಕೇಳಿದ್ದನ್ನು ಅನಂತಪುರಂ ಜಿಲ್ಲಾಧಿಕಾರಿ 2008ರಲ್ಲಿ ತಿರಸ್ಕರಿಸಿ, ನಂತರ ಒಂದೇ ತಿಂಗಳಲ್ಲಿ ಉಲ್ಟಾ ಹೊಡೆದು 304 ಎಕರೆ ಮಂಜೂರು ಮಾಡಿದ್ದಾರೆ. ಹೀಗೆ ಮಾಡಲು ಸರ್ಕಾರದ ಒತ್ತಡ ಕಾರಣ ಎಂದು ವರದಿ ಆರೋಪಿಸಿದೆ.












Click it and Unblock the Notifications