ಶ್ರೀವೈಷ್ಣವರ ಗುರು ರಂಗಪ್ರಿಯ ಸ್ವಾಮಿ ದೇಹಾಂತ್ಯ

ಮಾ.29ರಂದು ದೇಹತ್ಯಾಗ ಮಾಡಿದ ಸ್ವಾಮೀಜಿಗಳ ಅಂತಿಮ ಸಂಸ್ಕಾರ ವಿಧಿ ವಿಧಾನಗಳನ್ನು ಅವರ ಇಚ್ಛೆ ಮೇರೆಗೆ ನಂಜನಗೂಡಿನ ಹೆಡಥಾಲೆ ಎಂಬಲ್ಲಿ ಶುಕ್ರವಾರ(ಮಾ.30) ನಡೆಸಲಾಗಿದೆ.
ಮೈಸೂರು ಮೂಲದ ರಂಗಪ್ರಿಯ ಸ್ವಾಮಿಜಿಗಳು ಮಹಾನ್ ಸಂಸ್ಕೃತ ಪಂಡಿತರಾಗಿದ್ದರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.
ಕಿರು ಪರಿಚಯ: 1927ರಲ್ಲಿ ನಂಜನಗೂಡಿನ ಹೆಡತಾಲೆ ಗ್ರಾಮದಲ್ಲಿ ಶ್ರೀವೈಷ್ಣವ ಬ್ರಾಹ್ಮಣರ ಕುಟುಂಬದಲ್ಲಿ ವರದ ದೇಶಿಕಾಚಾರ್(ಪೂರ್ವಾಶ್ರಮದ ಹೆಸರು) ಜನಿಸಿದರು.
ಬಾಲ್ಯದಲ್ಲೇ ಸಂಸ್ಕೃತ, ವೇದ ಅಧ್ಯಯನದಲ್ಲಿ ಮುಂದಿದ್ದರು. ಆರಂಭದಲ್ಲಿ ಅವರ ತಂದೆ ತಿರುಮಾಲೈ ಶ್ರೀನಿವಾಸ ದೇಶಿಕಾಚಾರ್ಯ ಅವರಿಂದ ವೇದಪಾಠ ಹೇಳಿಸಿಕೊಂಡರು.
ಬಾಲ್ಯದಲ್ಲೇ ಸಂಸ್ಕೃತ ಗಾಯನದಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆಯನ್ನು ಸ್ವಾಮೀಜಿಗಳು ಹೊಂದಿದ್ದರು.
ಮಹಾರಾಜ ಕಾಲೇಜು, ಮೈಸೂರು ವಿವಿ ಹಾಗೂ ಸಾಗರ್ ವಿವಿ(ಮಧ್ಯಪ್ರದೇಶ)ಯಲ್ಲಿ ಪದವಿ, ಸ್ನಾತಕೋತ್ತರ ಪದವಿ(ಚಿನ್ನದ ಪದಕ ಸಮೇತ) ಪಡೆದರು
ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ನಂತರ ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು. ನಂತರ ದ್ರಾವಿಡಿಯನ್ ವಿವಿಯಲ್ಲಿ ಸಂದರ್ಶಕ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದರು.
ಯೋಗ, ಭಾರತೀಯ ಸಂಸ್ಕೃತಿ ಪ್ರತಿಪಾದಕರಾದ ಮಹಾಯೋಗಿ ಶ್ರೀರಂಗಮಹಾಗುರು ಅವರಲ್ಲಿ ಶಿಷ್ಯ ವೃತ್ತಿ ಆರಂಭಿಸಿ 1988ರಲ್ಲಿ ರಂಗಪ್ರಿಯ ಸ್ವಾಮಿಜಿ ಎನಿಸಿದರು.
ಮಹಾಭಾರತ, ರಾಮಾಯಣ, ಭಾಗವತ, ಹರಿವಂಶ ಮುಂತಾದ ಕೃತಿಗಳಿಗೆ ಭಾಷ್ಯ ಬರೆದರು. ಹನುಮಂತನಗರದಲ್ಲಿ ನೆಲೆಸಿದ್ದ ರಂಗಪ್ರಿಯ ಸ್ವಾಮೀಜಿ ಅಷ್ಟಾಂಗ ಯೋಗ ವಿಜ್ಞಾನ ಮಂದಿರಕ್ಕೆ ಬರುವ ಜ್ಞಾನಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.












Click it and Unblock the Notifications