ರೆಡ್ಡಿಯ ನೋಡಿ ಗೋಳಾಡಿದ ನಿರಾಭರಣ ಅರುಣಾ

ಅಕ್ರಮ ಗಣಿವೀರ ಜನಾರ್ಧನ ರೆಡ್ಡಿಯ ಪತ್ನಿಯಾಗಿ ಅರುಣಾ ಮೈಮೇಲೆ ಕಳೆದ ವರ್ಷ ಸೆ. 5ಕ್ಕೆ ಮುನ್ನ ದಿನಾ ಅಂದರೆ ರೆಡ್ಡಿಯನ್ನು ಸಿಬಿಐ ಬಂಧಿಸುವುದಕ್ಕೆ ಮುನ್ನ, ಮೈಮೇಲೆ ಮಣಗಟ್ಟಲೆ ಆಭರಣ ಹೇರಿಕೊಳ್ಳುತ್ತಿದ್ದರು. ಆದರೆ ಅದೇ ಅರುಣಾ ನಿನ್ನೆ ಜೈಲಿಗೆ ಎಂಟ್ರಿ ಹಾಕಿದಾಗ ಮೈಮೇಲೆ ಒಂದೇ ಒಂದು ಕವಡೆ ಆಭರಣವೂ ಇರಲಿಲ್ಲ - ಸಾದಾ ಸೀರೆಯುಟ್ಟ ಅರುಣಾ ನಿರಾಭರಣ- ಎಲ್ಲವೂ ಭಣಭಣ. ಅಂದಹಾಗೆ, ಇದೇ ಎಂಎಂಸಿ ಅಕ್ರಮ ಗಣಿ ಪ್ರಕರಣದಲ್ಲಿ ಅರುಣಾ ಲಕ್ಷ್ಮಿ ಸಹ ಆರೋಪಿ.
ಗಂಡನನ್ನು ನೋಡುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದ ಅರುಣಾ ಕಣ್ಣಲ್ಲಿ ಗಂಗಾ-ಕಾವೇರಿ ಕೋಡಿಯಾಗಿ ಹರಿದಿದೆ. ಸೀರೆ ಸೆರಗಿನಲ್ಲಿ ಕಣ್ಮುಚ್ಚಿಕೊಳ್ಳಲು ಯತ್ನಿಸಿದರು. ರೆಡ್ಡಿ ಇದಕ್ಕೆ ನಿರುತ್ತರರಾದರು ಎಂದು ಜೈಲು ಮೂಲಗಳು ತಿಳಿಸಿವೆ. ರೆಡ್ಡಿ ಪರಪ್ಪನ ಅಗ್ರಹಾರ ಜೈಲುವಾಸಿಯಾದ ದಿನದಿಂದಲೂ ಅವರಿಗೆ ಹತ್ತಿರದ ಸಂಬಂಧಿ ಪ್ರಕಾಶ್ ರೆಡ್ಡಿ ದಿನಾ ಊಟ ತೆಗೆದುಕೊಂಡು ಹೋಗುತ್ತಿದ್ದಾರೆ. ಸೋಮವಾರವೂ ಅರುಣಾಗೆ ಇದೇ ಪ್ರಕಾಶ್ ಸಾಥ್ ನೀಡಿದ್ದರು.
ಉಡುಪಿ ಭಟ್ಟರಿಂದ ಯುಗಾದಿ ಪೂಜೆ: ಮೊನ್ನೆ ಯುಗಾದಿಗೆ ಜನಾ ರೆಡ್ಡಿ ಜೈಲಿನಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಹ ಕೈದಿಗಳಿಗೆ ಯುಗಾದಿ ಸಿಹಿಯನ್ನೂ ಹಂಚಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಡುಪಿಯ ದಾಮೋದರ ಭಟ್ ಈ ಪೂಜೆ ಸಲ್ಲಿಸಿದರು ಎನ್ನಲಾಗಿದೆ.












Click it and Unblock the Notifications