ರಾಜಕಾರಣದಲ್ಲಿ 50 ವರ್ಷ ಕಳೆದ ಗೌಡರಿಗೆ ಸನ್ಮಾನ

ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ರಾಜ್ಯ ವಿಧಾನಸಭೆಗೆ ಕಾಲಿಟ್ಟಿದ್ದು 1962ರಲ್ಲಿ. ಹೊಳೆನರಸೀಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಮಣ್ಣಿನ ಮಗನಾದ ದೇವೇಗೌಡರು ಜನತಾ ಪಕ್ಷ, ಜನತಾದಳದ ಅಧ್ಯಕ್ಷರಾಗಿ, ನಂತರ ಜಾತ್ಯತೀತ ಜನತಾದಳದ ಸ್ಥಾಪಕರಾಗಿ ರಾಜಕಾರಣದಲ್ಲಿ ಸಾಕಷ್ಟು ಉಳುಮೆ ಮಾಡಿದ್ದಾರೆ. ಈಗ ತೆನೆಹೊತ್ತ ಮಹಿಳೆಯನ್ನು ಬೆಳೆಸಿ ನಿಲ್ಲಿಸಿದ್ದಾರೆ.
ಅವರ ಈ ಅಸಾಧಾರಣ ಸಾಧನೆಗಾಗಿ ನವದೆಹಲಿಯಲ್ಲಿ ಸೋಮವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೌಡರ ಶಿಷ್ಯರಾಗಿರುವ, ಜನತಾದಳ(ಜಾತ್ಯತೀತ)ದ ಪ್ರಧಾನ ಕಾರ್ಯದರ್ಶಿಯಾಗಿರುವ ದನಿಶ್ ಅಲಿ ಅವರು ದೇವೇಗೌಡರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಿಪಿಐ (ಎಂ) ನಾಯಕ ಪ್ರಕಾಶ್ ಕಾರಟ್ ಅವರು ಹಾಜರಿದ್ದು, ಗೌಡರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲದು : "ಈ ಸಂದರ್ಶದಲ್ಲಿ ಮಾತನಾಡಿದ ದೇವೇಗೌಡರು, ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಅಪೌಷ್ಟಿಕತೆ, ಅನ್ಯಾಯದ ವಿರುದ್ಧ ನನ್ನ ಹೋರಾಟ ನಿಲ್ಲದು. ನನ್ನ ಕೊನೆ ಉಸಿರಿರುವವರೆಗೆ ಹೋರಾಡುತ್ತಲೇ ಇರುತ್ತೇನೆ. ಇದು ನನ್ನ ಜನ್ಮಸಿದ್ಧ ಹಕ್ಕು" ಎಂದರು.












Click it and Unblock the Notifications