ರೆಡ್ಡಿ ಬಂಟ ಅಲಿಖಾನ್ ಶರಣಾಗಿದ್ದು ಏಕೆ?

'ಆರು ತಿಂಗಳ ಭೂಗತ ಜೀವನ ಸಾಕಾಗಿದೆ. ಕಳೆದು ತಿಂಗಳು ನನ್ನ ವೈದ್ಯ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಾಫಿ ಸಾಕ್ಷಿಯಾಗಬೇಕು ಅಂತಿದ್ದೀನಿ' ಎಂದು ಶರಣಾಗತಿಗೂ ಮುನ್ನ ಅಲಿಖಾನ್ ತನ್ನ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
'ನನ್ನ ಪ್ರಾಣಕ್ಕೆ ಅಪಾಯವಿದೆ. ದುಬೈಗೆ ಹಾರಿ ಹೋಗಲು ಪ್ರಯತ್ನಿಸಿದೆ. ಆದರೆ ನನ್ನ ವಿರುದ್ಧ ಜಾರಿಗೊಳಿಸಿದ್ದ ಇಂಟರ್ ಪೋಲ್ ಲುಕ್ ಔಟ್ ನೋಟಿಸ್ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ತಲುಪಿತ್ತು. ಆದ್ದರಿಂದ ಪರಾರಿ ಯತ್ನ ಕೈಗೂಡಲಿಲ್ಲ' ಎಂದೂ ಹೇಳಿಕೊಂಡಿದ್ದಾನೆ. ಷೇಕ್ ಸಾಬ್ ಮೈನ್ಸ್ ಕಂಪನಿಯಲ್ಲಿ ಅಲಿಖಾನ್ ಶೇ. 75ರಷ್ಟು ಪಾಲು ಹೊಂದಿದ್ದಾನೆ ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ ಜನಾ ರೆಡ್ಡಿ ಜಾಮೀನಿಗೆ ಅರ್ಜಿ ಸಲ್ಲಿಸಿದಾಗಲೆಲ್ಲ 'ರೆಡ್ಡಿಯ ಬಲಗೈ ಬಂಟ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಿದ್ದು. ಆತ ಪರಾರಿಯಾಗಿದ್ದಾನೆ. ಆದ್ದರಿಂದ ಆತ ಸಿಗುವವರೆಗೂ ರೆಡ್ಡಿಗೆ ಜಾಮೀನು ನೀಡುವುದು ಬೇಡ ಎಂದು ಸಿಬಿಐ ಒತ್ತಾಯಿಸುತ್ತಿತ್ತು. ಇದರಿಂದ ಪಾರಾಗಲು ಅಲಿಖಾನ್ ಗೆ ಶರಣಾಗುವಂತೆ ರೆಡ್ಡಿ ಕಡೆಯವರೇ ಸೂಚಿಸಿದ್ದರು' ಎನ್ನಲಾಗಿದೆ.
ಅಂದಹಾಗೆ, ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತು ಅಲಿಖಾನ್ ಇಂಜಿನಿಯರಿಂಗ್ ಕ್ಲಾಸ್ ಮೇಟುಗಳು. ಈ ಬಾಂಧವ್ಯವೇ ಆಂಧ್ರದ ಗುಂತಕಲ್ಲಿನ ಅಲಿಯನ್ನು ರೆಡ್ಡಿ ಒಳಕೋಣೆಗೆ ತಂದುಬಿಟ್ಟಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ಅಲಿಖಾನ್ ತಂದೆ 'ತನ್ನ ಮಗ ತಪ್ಪಿತಸ್ಥನಲ್ಲ. ಅನವಶ್ಯಕವಾಗಿ ಮಾಧ್ಯಮಗಳು ಆತನ ವಿರುದ್ಧ ಬರೆಯುತ್ತಿವೆ' ಎಂದು ಪ್ರಲಾಪಿಸುತ್ತಾ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿದ್ದರು.












Click it and Unblock the Notifications