ಧೃತರಾಷ್ಟ್ರ ಯಡಿಯೂರಪ್ಪ ಜೈಲಿನಲ್ಲಿರುವುದೇ ಸೂಕ್ತ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಯಡಿಯೂರಪ್ಪರನ್ನು ಕುರಿತು ವೆಂಕಟರಮಣಪ್ಪ ಹೀಗೆ ಹೇಳಿದ್ದಾರೆ. ಅಂದಹಾಗೆ ವೆಂಕಟರಮಣಪ್ಪ ಯಾರಪ್ಪ ಅಂದರೆ ಅವರು 'ಅನರ್ಹ ಪಕ್ಷೇತರ' ಶಾಸಕ. ಪಾವಗಡದ ವೆಂಕಟರಮಣಪ್ಪ ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ರೇಷ್ಮೆ ಸಚಿವರೂ ಆಗಿದ್ದರು.
'ಯಡಿಯೂರಪ್ಪ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ರಾಜಕೀಯ ಗಿಮಿಕ್. ಹಾಲಿ ಮುಖ್ಯಮಂತ್ರಿ ಡಿವಿಎಸ್ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ ಸರಕಾರದ ಅಳಿವು ಉಳಿವು ಯಡಿಯೂರಪ್ಪ ಕೈಯಲ್ಲಿದೆ. ಬಿಜೆಪಿಯನ್ನು ಬೀದಿಗೆ ತಂದು ಅವರು ಬಯಲಾಟ ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರವನ್ನು ಉರುಳಿಸಲು ಯಡಿಯೂರಪ್ಪ ದಾಳ ಉರುಳಿಸುತ್ತಿದ್ದಾರೆ, ಇದು ನಾಚಿಕೆಗೇಡು' ಎಂದು ಪಕ್ಷೇತರ ಶಾಸಕ ವೆಂಕಟರಮಣಪ್ಪ ವ್ಯಾಖ್ಯಾನಿಸಿದ್ದಾರೆ.
ಹೀಗೆ ಹುಟ್ಟುಹಬ್ಬದಂದು ಅನಿರೀಕ್ಷಿತವಾಗಿ ದಾಳಿ ಮಾಡಿರುವ ವೆಂಕಟರಮಣಪ್ಪ ಈ ಹಿಂದೆ ಇದೇ ಯಡಿಯೂರಪ್ಪ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ಎಂದಿದ್ದರು. 'ಬಿಜೆಪಿಯ ಇಂದಿನ ಅಧ್ವಾನದ ಸ್ಥಿತಿಗೆ ಆಪರೇಷನ್ ಕಮಲ ಕಾರಣ. ಅದಕ್ಕೆ ನೀರೆರೆದವರು ಇದೇ ಯಡಿಯೂರಪ್ಪ. ಇವರಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೊಡೇ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರೋದು ರಾಜ್ಯದ ದುರ್ದೈವ' ಎಂದು ಆಗ ಹೇಳಿದ್ದರು.












Click it and Unblock the Notifications