ಯಡಿಯೂರಪ್ಪ ಸ್ಪಷ್ಟ ನಿಲುವೇನು? ಫೆ.27ರಂದು ಪ್ರಕಟ

ಆ ನಿಲುವು ಏನೆಂಬುದನ್ನು ಫೆ.27ರಂದು ತಮ್ಮ ಹುಟ್ಟುಹಬ್ಬದಂದು ಯಡಿಯೂರಪ್ಪನವರು ಪ್ರಕಟಿಸಲಿದ್ದಾರೆ. ಯಡಿಯೂರಪ್ಪನವರ ನಿಲುವಿಗಿಂತ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಉಳಿದ ಶಾಸಕರ ನಿಲುವೇನು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಲ್ಲ ಮೂಲಗಳ ಪ್ರಕಾರ, ಶೇ.50ಕ್ಕೂ ಹೆಚ್ಚಿನ ಶಾಸಕರು ಮತ್ತೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಬೇಕೆಂದು ನಿಲುವು ಪ್ರಕಟಿಸಿದ್ದಾರೆ.
ಕೆಲ ಶಾಸಕರು ಸದಾನಂದ ಗೌಡರು, ದೇವೇಗೌಡರ ಚೇಲಾನಂತೆ ವರ್ತಿಸುತ್ತ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಗೆ ದೂರಿದ್ದಾರೆ. ಕೆಲವರು ಯಡಿಯೂರಪ್ಪಗೆ ಮುಖ್ಯಮಂತ್ರಿ ಪಟ್ಟ ದೊರೆಯದಿದ್ದರೂ ಉನ್ನತ ಸ್ಥಾನಮಾನವಾದರೂ ದೊರಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ 67 ಶಾಸಕರು, 11 ಸಂಸದರು, 18 ವಿಧಾನಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಹಾಗೆ ಕಾರಣವಿಲ್ಲದೆ ಸದಾನಂದ ಗೌಡರ ಪಟ್ಟ ಕಿತ್ತುಕೊಳ್ಳಬಾರದು ಎಂದು ಕೆಲವರು ಸ್ಪಷ್ಟವಾಗಿ ಹೇಳಿದ್ದಾರೆ. ಆ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ, ಜಗದೀಶ್ ಶೆಟ್ಟರ್ ಅವರ ಬಣ ಕೂಡ ಈ ಸಭೆಯಲ್ಲಿ ಭಾಗವಹಿಸಿ ಹಸನ್ಮುಖಿಯಾಗಿ ಹೊರಬಂದಿದೆ. ಸದ್ಯಕ್ಕೆ ಏಕಾಂಗಿಯಾಗಿರುವ ಸದಾನಂದ ಗೌಡರನ್ನು ತೊಲಗಿಸಿ ಆ ಪಟ್ಟದಲ್ಲಿ ಯಡಿಯೂರಪ್ಪ ಕೂಡುತ್ತಾರಾ, ಶೆಟ್ಟರ್‌ಗೆ ಪಟ್ಟಾಭಿಷೇಕ ಮಾಡುತ್ತಾರಾ ಎಂಬುದು ಗಡ್ಕರಿ ಬಂದ ನಂತರ ತಿಳಿದುಬರಲಿದೆ.












Click it and Unblock the Notifications