ನೀಲಿಚಿತ್ರ ನೀವು ನೋಡಿಲ್ಲವೆ? ಪತ್ರಕರ್ತರಿಗೆ ಯಡ್ಡಿ ಪ್ರಶ್ನೆ

ವಿಧಾನಸಭೆಯಂಥ ಪವಿತ್ರ ಸ್ಥಳದಲ್ಲೇ ನೀಲಿ ಚಿತ್ರ ನೋಡಿದ ಕಳಂಕಿತ ಶಾಸಕರನ್ನು ಬಹಿರಂಗವಾಗಿ ಬೆಂಬಲಿಸಿರುವ ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಮಾಧ್ಯಮದವರು ಮಾತ್ರವಲ್ಲ ವೇದಿಕೆಯ ಮೇಲೆ ಕುಳಿತಿದ್ದ ಗಣ್ಯರು ಕೂಡ ದಂಗಾದರು. ಯಡಿಯೂರಪ್ಪ ಇಂಥ ಹೇಳಿಕೆಯನ್ನು ನೀಡಿರುವುದು ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ.
ವೇದಿಕೆಯ ಮೇಲೆ ಯಡಿಯೂರಪ್ಪನವರ ಅಕ್ಕಪಕ್ಕದಲ್ಲಿ ಮಗ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ನೂರಾರು ಸಾರ್ವಜನಿಕರ ನಡುವೆ ಹಲವಾರು ಹೆಂಗಳೆಯರೂ ಇದ್ದರು. ಆಗ ಮಾತನಾಡುತ್ತ, ಆವೇಶಕ್ಕೊಳಗಾದ ಯಡಿಯೂರಪ್ಪ ಮೇಲಿನಂತೆ ಪ್ರಶ್ನೆ ಹಾಕಿದ್ದಾರೆ.
ನೀಲಿ ಚಿತ್ರ ಹಗರಣದಲ್ಲಿ ಸಿಕ್ಕಿಬಿದ್ದಿರುವ ಮೂವರು ಶಾಸಕರಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ ಮತ್ತು ಕೃಷ್ಣ ಜೆ. ಪಾಲೇಮಾರ್ ಅವರು ಯಡಿಯೂರಪ್ಪನವರ ಬೆಂಬಲಿಗರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅನೇಕ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದೆ, ಅನೇಕ ಸಾಧನೆಗಳನ್ನು ಮಾಡಿದೆ. ಅವುಗಳ ಬಗ್ಗೆ ಬರೆಯುವುದು ಬಿಟ್ಟು ನೀಲಿ ಚಿತ್ರ ವೀಕ್ಷಣೆಯಂಥ ಕ್ಷುಲ್ಲಕ ವಿಷಯದ ಹಿಂದೆ ಏಕೆ ಬಿದ್ದಿದ್ದೀರಿ ಎಂದು ಯಡಿಯೂರಪ್ಪ ಕಿಡಿಕಾರಿದರು.
ತಮ್ಮ ಬೆಂಬಲಿಗರು ಅಶ್ಲೀಲ ಚಿತ್ರ ವೀಕ್ಷಣೆಯ ಹಗರಣದಲ್ಲಿ ಸಿಲುಕಿರುವುದು ಮತ್ತು ಬಿಜೆಪಿ ಸರಕಾರ ಅವರ ಬೆಂಬಲಕ್ಕೆ ಬಾರದಿರುವುದು ಯಡಿಯೂರಪ್ಪನವರನ್ನು ಸಹಜವಾಗಿ ಮುಜುಗರಕ್ಕೆ ಈಡುಮಾಡಿದೆ. ವೇದಿಕೆ ಏರಿದಾಗ ಕೂಡ ಅವರು ಈಶ್ವರಪ್ಪ ಮತ್ತು ಸದಾನಂದ ಗೌಡರ ಪಕ್ಕದಲ್ಲಿ ಕೂಡಲಿಲ್ಲ ಮತ್ತು ಮುಖಕ್ಕೆ ಮುಖ ನೀಡಿ ಮಾತನಾಡಲಿಲ್ಲ. ಕಾರ್ಯಕ್ರಮದುದ್ದಕ್ಕೂ ಮುಖ ಬಿಗಿದುಕೊಂಡೇ ಇದ್ದರು. ಯಡಿಯೂರಪ್ಪನವರ ಈ ಹೇಳಿಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.












Click it and Unblock the Notifications