ಜನಶ್ರೀ ಟಿವಿ ಮೇಲೆ ಸಿಟ್ಟಿಗೆದ್ದ ಶಾಸಕ ಸಿಟಿ ರವಿ

ನನ್ನ ಘನತೆಗೆ ಚ್ಯುತಿ ಉಂಟು ಮಾಡಿ, ಶಾಸಕರಾಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುವ ರೀತಿಯಲ್ಲಿ ಮೂರು ದಿನಗಳ ಕಾಲ ಜನಶ್ರೀ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದೆ. ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುವುದು ಹಾಗಿರಲಿ. ಕನಿಷ್ಠಪಕ್ಷ ನನ್ನ ಅಭಿಪ್ರಾಯವನ್ನಾದರೂ ಕೇಳಬಹುದಿತ್ತು.
ಶಾಸಕನಾಗಿ ಕರ್ತವ್ಯ ನಿರ್ವಹಿಸದಂತೆ ಭಯ ಸೃಷ್ಟಿಸುವ ಮೂಲಕ ಮಾನಹಾನಿ ಮಾಡಿರುವ ಸುದ್ದಿ ವಾಹಿನಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನನ್ನ ಬಳಿ ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ ಎಂದು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಲ್ಲಿಸಿರುವ ದೂರನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿದ್ದಾರೆ.
ಆದರೆ, ಈ ಸಂದರ್ಭದಲ್ಲಿ ಸುದ್ದಿ ವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ, ವಿರೋಧಿಸಿ 'ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ' ಎಂದರು.
ಆದರೆ ಕಾಂಗ್ರೆಸ್‌ನ ಡಾ.ಎಂ.ಸಿ.ಸುಧಾಕರ್ ಹಾಗೂ ಅವರು ಕಾನೂನು ಸಚಿವ ಸುರೇಶ್‌ಕುಮಾರ್ ರವಿಯವರನ್ನು ಬೆಂಬಲಿಸಿದರು. ನಂತರ ಸ್ಪೀಕರ್ ದೂರನ್ನು ಸಮಿತಿಗೆ ವರ್ಗಾಯಿಸಿರುವುದಾಗಿ ಪ್ರಕಟಿಸಿದರು. ಶಾಸಕ ಸಿಟಿ ರವಿ ಹಾಗೂ ಅವರ ಪತ್ನಿ ವಿರುದ್ಧ ಸಿಎ ಸೈಟ್ ಗಿಟ್ಟಿಸಿಕೊಂಡ ಆರೋಪ ಹೊರೆಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.












Click it and Unblock the Notifications