ಜೆಡಿಎಸ್ಸಿಗೆ ಮಧು ಸೇರ್ಪಡೆ, ಗೌಡ್ರ ತಂತ್ರಗಾರಿಕೆ

ಹಳಿಯಾಳದಲ್ಲಿ ಜನವರಿ 28 ರಂದು ನಡೆಯಲಿರುವ ಸಮಾವೇಶದಲ್ಲಿ ಮಧು ಬಂಗಾರಪ್ಪ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ ಮೇಲೆ ಪರ ವಿರೋಧ ಹೇಳಿಕೆಗಳು ಬಂದು ಈಗ ತಣ್ಣಗಾಗಿದೆ.
ಗೌಡರ ತಂತ್ರವಾದರೂ ಏನು?: ಬಿಜೆಪಿ ಪ್ರಾಬಲ್ಯವಿರುವ ಮಲೆನಾಡು-ಕರವಾಳಿ ಜಿಲ್ಲೆಗಳಲ್ಲಿ ಜೆಡಿಎಸ್ ಅಧಿಪತ್ಯ ಸ್ಥಾಪಿಸಲು ಕಸರತ್ತು ಆರಂಭವಾಗಿದೆ. ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರ ಅವರ ಜನಪ್ರಿಯತೆಯ ಲಾಭ ಪಡೆದು ಬಿಜೆಪಿಯನ್ನು ಮಣ್ಣು ಮುಕ್ಕಿಸಲು ಜೆಡಿಎಸ್ ಯೋಜಿಸಿದೆ.
ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು ಭಾಗದಲ್ಲಿ ಹಳೆತಲೆಗಳಿಗೆ, ಯುವ ನಾಯಕರಿಗೆ ಈಗಲೂ ಬಂಗಾರಪ್ಪ ಅವರೇ ಆದರ್ಶಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ.
ಮಲೆನಾಡು-ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿಗೆ ಇರುವ ಈಡಿಗ ಸಮುದಾಯ, ಅಲ್ಪಸಂಖ್ಯಾತರ ಬೆಂಬಲ ಸಿಕ್ಕರೆ ಜೆಡಿಎಸ್ ವೋಟ್ ಬ್ಯಾಂಕ್ ಲೆಕ್ಕಾಚಾರ ಸರಿಯಾಗುತ್ತದೆ. ದೇವೇಗೌಡರ ಈ ನಡೆ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ಸಿಗೂ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.
ಬಂಗಾರಪ್ಪ ನಿಧನದ ಅನುಕಂಪದ ಅಲೆಯನ್ನು ಮತಗಳಾಗಿ ಪರಿವರ್ತನೆಗೊಂಡರೆ, ಜೆಡಿಎಸ್ ಯೋಜನೆ ಫಲಿಸಿದ್ದಂತಾಗುತ್ತದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಭದ್ರವಾಗಿರುವ ಜೆಡಿಎಸ್, ಬಳ್ಳಾರಿಯಲ್ಲಿ ಹೊಂದಾಣಿಕೆ ರಾಜಕೀಯದಲ್ಲಿ ಯಶ ಕಂಡಿದೆ. ಈಗ ಮಲೆನಾಡು- ಕರಾವಳಿ ಪ್ರದೇಶಗಳತ್ತ ಹರಿಸಿದೆ. ಏನಾಗುವುದೋ ಕಾದು ನೋಡೋಣ...












Click it and Unblock the Notifications