ರಸ್ತೆ ಕುಸಿತ: ಸವಾರರ ಕಿವಿಗೆ ಲಾಲ್‌ಬಾಗ್ ಇಟ್ಟ ಕಾರ್ಪೊರೇಟರ್

ಆದರೆ ಸ್ಥಳೀಯ ಕಾರ್ಪೊರೇಟರ್ ಮಹಾಶಯರು (ಅನಿಲ್‌ಕುಮಾರ್) ಮತ್ತು ಬಿಬಿಎಂಪಿ ಅಧಿಕಾರಿಗಳು 'ಲಾಲ್ ಬಾಗ್ ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂತಹ ಕುಸಿತ ಸಾಮಾನ್ಯ. ಎರಡು ತಿಂಗಳ ಹಿಂದೆ ಕೃಂಬಿಗಲ್ ರಸ್ತೆಯಲ್ಲೂ ಇದೇ ರೀತಿ ಆಗಿತ್ತು' ಎಂದು ಹೇಳಿ ವಾಹನ ಸವಾರರ ಕಿವಿಯ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದ್ದಾರೆ.
ನಿನ್ನೆ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಹೀಗೆಯೇ ಆಗಿದೆ. ಇದ್ದಕ್ಕಿದ್ದಂತೆ ರಸ್ತೆ ಕುಸಿತ ಸಂಭವಿಸಿ, ದೊಡ್ಡ ಹೊಂಡ (ಅಗೇವು?) ಸೃಷ್ಟಿಯಾಗಿದೆ. ವಾಹನ ಸವಾರರಿಗೆ ನಿಂತ ನೆಲವೇ ಕುಸಿದಂತಾಗಿದೆ. ಹಾಗಾಗಿ ಲಾಲ್‌ಬಾಗ್ ಸುತ್ತಮುತ್ತ ಈಗ ಡೇಂಜರ್ ಝೋನ್. ಜನ ಆತಂಕದ ಮಡುವಿನಲ್ಲಿದ್ದಾರೆ.
ನಿನ್ನೆ ಭಾನುವಾರವಾದ್ದರಿಂದ ವಾಹನ ಸಂಚಾರ ಕಡಿಮೆ ಇತ್ತು. ಹೀಗಾಗಿ, ಯಾವುದೇ ಅಪಾಯ ಸಂಭವಿಸಿಲ್ಲ. ಬೇರೆ ದಿನಗಳಲ್ಲಿ ಆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ವಾಹನ ಸವಾರರ ಗತಿಯೇನು. ಏನಿಲ್ಲ ಈಗ ಬಿರುಕುಬಿಟ್ಟ ಗಳಿಗೆಯಲ್ಲೇ ಆ ಜಾಗದಲ್ಲಿ ವಾಹನ ಇದ್ದಿದ್ದರೆ ಗತಿಯೇನು?
ಕೆರೆ ಕಾಟ ಇಷ್ಟು ದಿನ ಇಲ್ಲದ್ದು ಈಗೇಕೆ? ಸುಖಾಸುಮ್ಮನೆ ಲಾಲ್ ಬಾಗ್ ಕೆರೆ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಸೃಷ್ಟಿಯಾಗಿರುವ ಹೊಂಡ ನೋಡಿದರೆ ರಸ್ತೆ ನಿರ್ಮಾಣ ಕಾಮಗಾರಿ ಎಷ್ಟು ಪಸಂದಾಗಿ ಮಾಡಿದ್ದಾರೆ ಎಂದು ಯಾರಿಗೇ ಆಗಲಿ ಗೊತ್ತಾಗುತ್ತದೆ. ಅದು ಬಿಟ್ಟು ಕೆರೆಕಟ್ಟೆ, ಮೆಟ್ರೋ ಅಂತೆಲ್ಲ ಹೇಳುವುದು ಎಷ್ಟು ಸಮಂಜಸ? ಮೊದಲು ಕಳಪೆ ಕಾಮಗಾರಿಯನ್ನು ಕೈಬಿಟ್ಟು ಸುಭದ್ರವಾದ ರಸ್ತೆಗಳ ನಿರ್ಮಾಣ ಮಾಡಿಕೊಡಲಿ ಸಾಕು.












Click it and Unblock the Notifications