ಇದು ನಿಜ, ಯಾವೊಬ್ಬ ಪೊಲೀಸಪ್ಪನೂ ಗಣಿ ದುಡ್ಡು ಮುಟ್ಟಿಲ್ಲ

ಅಲ್ಲಿಗೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸಲ್ಲಿಸಲಾಗಿರುವ ಈ ಅಧಿಕೃತ ವರದಿಯಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಹೆಗ್ಡೆ ಅವರು ಹೆಸರಿಸಿರುವ 191 ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಇದನ್ನು ಕೇಳಿ ಚಂಚಲಗೂಡ ಜೈಲಿನಲ್ಲಿರುವ ಕೈದಿ ನಂಬರ್ 697 ಕಿಸಕ್ಕನೆ ನಕ್ಕಿದಂತಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದ 191 ಪೊಲೀಸ್ ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದು, ಗಣಿ ಧಣಿಗಳಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಆರೋಪಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಗುಪ್ತಚರ ಇಲಾಖೆಯ ಉಪ ಪೊಲೀಸ್ ಆಯುಕ್ತ ವಿಎಸ್ ಡಿಸೋಜಾ ಅವರಿಗೆ ಸೂಚಿಸಿತ್ತು.
ಇದೀಗ '191 ಪೊಲೀಸ್ ಅಧಿಕಾರಿಗಳ ಮೇಲಿನ ಆರೋಪ ನಿರಾಧಾರ. ಈ ಎಲ್ಲ ಆರೋಪಿಗಳೂ ಗಣಿ ಮಾಲೀಕರಿಂದ ಲಂಚ ಪಡೆದಿದ್ದಾರೆ ಎಂಬುದಕ್ಕೆ ಸಮರ್ಪಕ ಸಾಕ್ಷ್ಯಾಧಾರ ಇಲ್ಲ. ಆದ್ದರಿಂದ ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ' ಎಂದು ಡಿಸೋಜಾ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಯಃಕಶ್ಚಿತ್ ಲಾರಿ ಡ್ರೈವರ್ ಬಳಿಯೂ ಲಂಚಕ್ಕಾಗಿ ಹಲ್ಲುಗಿಂಜುವ ಪೊಲೀಸರು ನಮ್ಮ ಮಧ್ಯೆಯಿರುವಾಗ ಇಡೀ ಬಳ್ಳಾರಿಯನ್ನೇ ಟ್ರಕ್ಕುಗಳಲ್ಲಿ ಕೊಳ್ಳೆ ಹೊಡೆದಿರುವ ಗಣಿ ಖದೀಮರಿಂದ ಪೊಲೀಸರು ಲಂಚ ಸ್ವೀಕರಿಸಿಲ್ಲ ಎಂದು ಹೇಳಿರುವುದು ಆಶ್ಚರ್ಯ ತರುವಂತಾಗಿದೆ.
ಅಷ್ಟಕ್ಕೂ ಡಿಸೋಜಾ ವರದಿಯಲ್ಲಿ ಪೊಲೀಸರು ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿಲ್ಲ. ಬದಲಿಗೆ ಆ ರೀತಿ ಪೊಲೀಸರು ಗಣಿ ಧಣಿಗಳಿಂದ ಲಂಚ ಸ್ವೀಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷಾಧಾರಗಳ ಕೊರತೆಯಿದೆ ಎಂದಿದ್ದಾರೆ!











Click it and Unblock the Notifications