ಸಿಬಿಐ ಪರ ಹೈಕೋರ್ಟ್ ತೀರ್ಪು: ರೆಡ್ಡಿಗೆ ಜಾಮೀನು ಸಿಗುತ್ತಾ!?

ನಾಳೆ ರೆಡ್ಡಿ ಜಾಮೀನು ಕುರಿತು ಕೋರ್ಟ್ ನೀಡಲಿರುವ ತೀರ್ಪು ಮಹತ್ವದ್ದಾಗಿದೆ. ಒಂದು ವೇಳೆ ಜಾಮೀನು ನಿರಾಕರಿಸಿದರೆ ರೆಡ್ಡಿಗೆ ಇನ್ನೂ ಆರು ತಿಂಗಳು ಜೈಲುವಾಸವೇ ಗಟ್ಟಿ. ಓಬಳಾಪುರಂ ಅಕ್ರಮ ಗಣಿ ಹಗರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಹಿಂದೇಟು ಹಾಕಿದೆ.
ಇದರಿಂದ ರೆಡ್ಡಿಗೆ ನಾಳೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಸಿಗುವುದು ದುರ್ಲಭವಾಗಿದೆ ಎನ್ನುತ್ತಾರೆ ಕಾನೂನು ಪಂಡಿತರು. ಜಾಮೀನು ದೊರೆತರೆ ರೆಡ್ಡಿ ಜೊತೆಗೆ ಅವರ ಓಬಳಾಪುರಂ ಮೈನಿಂಗ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಶ್ರೀನಿವಾಸ ರೆಡ್ಡಿ ನಾಲ್ಕು ತಿಂಗಳ ಜೈಲುವಾಸದಿಂದ ಹೊರಬರಲಿದ್ದಾರೆ.
ಸೋಮವಾರವಷ್ಟೇ ಓಬಳಾಪುರಂ ಗಣಿ ಹಗರಣದಲ್ಲಿ ಆರೋಪಿಯಾಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನನ್ನು ಆಂಧ್ರಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ.
ಜಾಮೀನು ಆದೇಶದ ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲು ಏರಿ ಜಾಮೀನು ಅದನ್ನು ರದ್ದುಗೊಳಿಸಬೇಕೆಂದು ಕೋರಿತ್ತು. ಸಿಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎನ್.ಆರ್.ಎಲ್.ನಾಗೇಶ್ವರ ರಾವ್ ಅವರ ಪೀಠವು, ಆರೋಪಿಯನ್ನು ಬಿಡುಗಡೆ ಮಾಡಿದರೆ ತನಿಖೆಗೆ ತೀವ್ರ ಅಡ್ಡಿಯಾಗುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟು, ಜಾಮೀನು ಆದೇಶವನ್ನು ರದ್ದುಗೊಳಿಸಿತು.












Click it and Unblock the Notifications