ಜೋಗಿ ಫೇಸ್ ಬುಕ್ ಕಥೆ ಅನಾವರಣಗೊಡಿದ್ದು ಹೀಗೆ

ಕೊರೆವ ಚಳಿಯಲಿ ಬೆಳಿಗ್ಗೆ ಬೇಗನೆ ಎದ್ದು, ಅಣ್ಣನನ್ನು ಸಂಜಯ ನಗರದಿಂದ ಕಾಮಾಕ್ಷಿ ಪಾಳ್ಯದ ಹೊರವಲಯದ ವರ್ತುಲ ರಸ್ತೆಯ ಬಳಿ ಬಿಟ್ಟು ನಾನೂ ಹಾಗೂ ಸ್ನೇಹಿತ ಶಿವು ಲಗುಬಗನೆ ಗಾಂಧಿ ಬಜಾರ್ ಹತ್ತಿರ ಬಂದು ಸೇರಿದ್ವಿ.
ಸಿಕ್ಕಾಪಟ್ಟೆ ಹಸಿದಿದ್ದ ಹೊಟ್ಟೆಗೆ ಇಡ್ಲಿ-ವಡೆಯ ಸಾಂತ್ವಾನ ಮಾಡಿಸಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ಗೆ ಬಂದು ಆಸೀನರಾಗೋದಕ್ಕೂ ಸಮಾರಂಭ ಪ್ರಾರಂಭ ಮಾಡೋದಕ್ಕೂ ಸರಿಹೋಯ್ತು. ಪುಣ್ಯಕ್ಕೆ ಸರಿಯಾದ ಸಮಯಕ್ಕೆ ಬಂದ್ವಿ ಅಂತ ಮನಸ್ಸು ಉಲ್ಲಸಿತವಾಯ್ತು.
ಅದಕ್ಕೆ ನೀರೆರೆದು ಬೆಳೆಸಿದಂತೆ ವೇದಿಕೆ ಮೇಲಿದ್ದವರ ದರ್ಶನಮಾಡಿತು. ಜೋಗಿಯವರು, ಯೋಗರಾಜ್ ಭಟ್ ಅವರು,ಶ್ರೀರಾಮ್ ಅವರು, ಗಂಗಾಧರ ಬೆಳ್ಳಾರೆ ಹಾಗೂ ಶ್ರೀನಿವಾಸ್ ವೈದ್ಯರು ವೇದಿಕೆಗೆ ಇನ್ನಿಲ್ಲದ ಕಳೆಯನ್ನು ತಂದಿದ್ದರು.
ಅಂಕಿತ ಪುಸ್ತಕಾಲಯದ ಪ್ರಕಾಶ್ ಕಂಬತ್ತಳ್ಳಿ ಅವರು ಮಾತಾಡ್ತಾಯಿದ್ದಾಗ ಹಾಗೆಯೆ ಎಲ್ಲೆಡೆ ಕಣ್ಣಾಯಿಸಿದಾಗ ಕಂಡದ್ದು, ನನ್ನಲ್ಲಿಯ ಖುಷಿಯನ್ನು ಮುಗಿಲ ಮುಟ್ಟಿಸಿತ್ತು. ಜ್ಞಾನಪೀಠ ಪ್ರಶಸ್ತಿಯ ಭಾಜನಾದ ಗಿರೀಶ್ ಕಾರ್ನಾಡ್ ಹಾಗೂ ಟಿ.ಎನ್ ಸೀತಾರಾಮ್ ಅವರು ಆ ಸಭಾಂಗಣಕ್ಕೆ ಇನ್ನಷ್ಟು ಮೆರುಗು ತರಲು ಪ್ರೇಕ್ಷಕರೊಟ್ಟಿಗೆ ಮುಂದಿನ ಸಾಲನ್ನು ಅಲಂಕರಿಸಿದ್ದರು. ಹಿರಿಯರಾದ ಶ್ರೀನಿವಾಸ ವೈದ್ಯರು ತಮ್ಮ ಅಮೃತ ಹಸ್ತಗಳಿಂದ ಜೋಗಿಯವರ ಪುಸ್ತಕ "ಫೇಸ್-ಬುಕ್ ಡಾಟ್ಕಾಂ/ಮಾನಸ ಜೋಷಿ" ಹಾಗೂ ಗಂಗಾಧರ ಬೆಳ್ಳಾರೆಯವರ "ತಪ್ಪು ತಿದ್ದುವ ತಪ್ಪು" ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ನಂತರ ಶ್ರೀನಿವಾಸ ವೈದ್ಯರು ಮಾತಾಡಿ ಈ ಇಳಿವಯಸ್ಸಿನಲ್ಲಿ ಬರೆಯುವ ಹುಮ್ಮಸ್ಸನ್ನು ತಡವಿದ ಪ್ರಕಾಶ್ ಕಂಬತ್ತಳ್ಳಿಯವರನ್ನು ಛೇಡಿಸುತ್ತಾ ಪ್ರಾರಂಭ ಮಾಡಿದರು.
'ನಾನು ಇಲ್ಲಿ ಮಾತಾಡೋದು, ಶ್ರಿಕೃಷ್ಣ ಅರ್ಜುನನಿಗೆ ಭಗವದ್ಗೀತೆ ಉಪದೇಶ ಮಾಡುವುದರ ಬದಲಾಗಿ, ಅರ್ಜುನನೇ ಶ್ರಿಕೃಷ್ಣನಗೆ ಭಗವದ್ಗೀತೆ ಉಪದೇಶ ಮಾಡಿದಂತೆನ್ನುತ್ತಾ', ನಮ್ಮಂತಹ ನವಯುವಕರ ವಾಕ್ ಚಾತುರ್ಯವನ್ನು ನಾಚಿಸುವಂತೆ ಮಾತಾಡಿದರು.
ಅವರು ಜೋಗಿಯವರ ಬರವಣಿಗೆಯ ಜಲಪಾತದ ಬಗ್ಗೆ ಹೇಳುತ್ತಾ, ಜೋಗಿಯವರ ಬರವಣಿಗೆಯಲ್ಲಿಯ ಭೋರ್ಗರೆವ ಸೌಂದರ್ಯ, ವಾಸ್ತವಿಕತೆಯಲ್ಲಿಯ ಥಳಕು-ಬಳಕು-ಹುಳುಕುಗಳನ್ನು ತೆರೆದಿಡುವ ಕೌಶಲ್ಯವನ್ನು ಮನಸಾರೆ ಪ್ರಶಂಸಿಸಿದರು.
ಯೋಗರಾಜ ಭಟ್ಟರ ಚುಟುಕು ಭಾಷಣ : ನಂತರ ಪರಮಾತ್ಮನಂತೆ ನಿರಮ್ಮಳವಾಗಿದ್ದ ಯೋಗರಾಜ ಭಟ್ಟರು, ಬಣ್ಣದ ಜಗತ್ತಿನಿಂದ ಬಂದಿದ್ದರೂ, ಅಲ್ಲಿದ್ದ ಸಾಹಿತ್ಯ ಪ್ರಪಂಚದ ಮಿನುಗುತಾರೆಗಳ ಮುಂದೆ ನಾನೇನು, ಅಂತ ಮುಜುಗರ ಪಟ್ಟವರಂತೆ ಬಣ್ಣದ ಮಾತುಗಳಾಡದೆ, ಇನ್ನೇನು ಮಾತನಾಡಲು ಪ್ರಾರಂಭ ಮಾಡಿದರು ಅನ್ನುವಷ್ಟರಲ್ಲಿ ಅವರ ಮಾತು ಮುಗಿದಿತ್ತು. ಅದು ಅವರಲ್ಲಿದ್ದ ಒಬ್ಬ ವಿದ್ಯಾರ್ಥಿಯನ್ನು ಹೊರಗೆಡವಿತ್ತು ಅಂತ ನನಗನ್ನಿಸ್ತಾಯಿದೆ.
ಶ್ರೀರಾಮ್ :ನಂತರ ಬಂದ ಪ್ರೊಫೆಸರ್ ಶ್ರೀರಾಮ್ ಅವರು, ಜೋಗಿಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇದೇ ಸಮಯವೆಂದು ಪ್ರಾರಂಭ ಮಾಡಿ, ಅಲ್ಲಿ ಸೇರಿದ್ದವರನ್ನು ತಮ್ಮ ಮಾತಿನ ಚಾಲಾಕಿತನದಿಂದ ನಗೆಗಡಲಿನಲ್ಲಿ ತೇಲಿಸುತ್ತಾ, ಜೋಗಿಯವರ ಮತ್ತು ಗಂಗಾಧರ ಬೆಳ್ಳಾರಿಯವರ ಬಗ್ಗೆ ಮಾತಾಡಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಇಂಥವರ ಕೈಯಲ್ಲಿ ಓದುವ ಅವಕಾಶ ನಮ್ಮಂತಹವರಿಗೆ ದೂರದ ಊರುಗಳಲ್ಲಿ ಸಿಗಲಿಲ್ಲವಲ್ಲ ಅಂತ ಸಣ್ಣಗೆ ವಿಷಾದ ಗೊತ್ತಿಲ್ಲದಂತೆ ಮನದಲ್ಲಿ ನುಸುಳಿತ್ತು.
ಗಂಗಾಧರ ಬೆಳ್ಳಾರೆ : ಅವರಾದ ಕೂಡಲೆ ಬಂದ ಗಂಗಾಧರ ಬೆಳ್ಳಾರೆಯವರು, ತಾವು ಬರೆಯಲು ಕಾರಣವೇನು, ಈ ಕೌನ್ಸಲಿಂಗ್ ಕ್ಷೇತ್ರಕ್ಕೆ ಬಂದದ್ದು ಹೇಗೆ ಎಂದು ಬಣ್ಣಿಸುತ್ತಾ, ಚಿಕ್ಕ ಮಗುವಾಗಿದ್ದಾಗಿನಿಂದ ಅವರನ್ನು ಕಾಡುತ್ತಲೇ ಬಂದಿದ್ದ ಅವರ ತಂದೆಯ ಮಾತುಗಳನ್ನು ನೆನೆಯುತ್ತಾ, ಬಹುಶ: ಕೃತಿಯನ್ನು ಅವರಿಗೆ ಅರ್ಪಿಸಿದರು ಅನ್ಸುತ್ತೆ. ಅವರು ತಮ್ಮ ಯಶೋಗಾಥೆಯನ್ನು ಬಣ್ಣಿಸುತ್ತಿದ್ದರೆ ನಾವೆಲ್ಲಾ ಎಲ್ಲೋ ಕಳೆದು ಹೋಗಿದ್ದೆವು.
ಜೋಗಿ : ಅವರಾದ ನಂತರ, ಅಲ್ಲಿವರೆಗೂ ಎಲ್ಲರೂ ಕಾದು ಕೂತಿದ್ದ, ಕೊನೆಯಲ್ಲಿ ಬರುವ ಷೋ ಸ್ಟಾಪರ್ ತರಹ ಬಂದ ಜೋಗಿಯವರು, ಅವರು ಹೇಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪುಸ್ತಕಗಳನ್ನು ಬರೆಯಲು ಸಾಧ್ಯವಾಯ್ತು ಎಂಬ ರಹಸ್ಯವನ್ನು ನಮ್ಮೆದುರು ಬಹಿರಂಗ ಪಡಿಸಿದರು.
ತಮ್ಮ ಹಳ್ಳಿಗೆ ತಾವು ಆಗಾಗ್ಗೆ ಹೋಗೋದ್ರಿಂದ, ಅಲ್ಲಿ ಜನರಿಗಿಂತ ಕಥೆಗಳೇ ಜಾಸ್ತಿ ಸಿಗುವುದರಿಂದ , ಬರೆಯುವ ಸರಕು ಜಾಸ್ತಿಯೇ ಸಿಕ್ಕಿರುವುದರಿಂದ, ಬಿ.ಪಿ
ವಾಡಿಯಾ ಸಭಾಂಗಣದಲ್ಲಿ ಪುಸ್ತಕ ಹೆರುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ, ಅಂತ ಒಂದೇ ಸಮನೆ ಅರಳು ಹುರಿದಂತೆ ಮಾತಾಡಿ ಸುಮ್ಮನಾದಾಗ, ರಪರಪನೆ ಸೋನೆ ಮಳೆ ಬಂದು ನಿಂತಂಗಾಯ್ತು.
ಕೊನೆಯಲ್ಲಿ ಬಂದಿದ್ದ ಎಲ್ಲಾ ಗಣ್ಯರು, ನೆರೆದಿದ್ದ ನಮ್ಮಂತಹ ಸಾಹಿತ್ಯಾಸಕ್ತರಿಗೆ ತಮ್ಮ ಹಸ್ತಾಕ್ಷರ ನೀಡಿ, ಯಾವ ಹಮ್ಮು-ಬಿಮ್ಮು ಇಲ್ಲದೆ ಫೋಟೋ ತೆಗೆಯಿಸಿಕೊಂಡು ನಮ್ಮನ್ನು ಇನ್ನಷ್ಟು ಖುಷಿಗೊಳಿಸಿ, ಈ ಪುಸ್ತಕ ಬಿಡುಗಡೆ ಸಮಾರಂಭದ ನೆನಪು ಚಿರಕಾಲ ಬಾಳಿನಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆಯುವಂತೆ ಮಾಡಿದರು.
ಅದೇ ಖುಷಿಯಲ್ಲಿ ಮನೆಗೆ ಬಂದ ಮೇಲೆ, ಚಿತ್ರ ರೂಪದಲ್ಲಿ ಸ್ಥಾನ ಪಡೆದಿದ್ದ ಸಮಾರಂಭಕ್ಕೆ ಅಕ್ಷರರೂಪ ಕೊಡಲು ಮನಸ್ಸು ಹಾತೊರೆಯುತ್ತಾ ಇತ್ತು. ಅದರ ಪರಿಣಾಮ ಈಗ ನಿಮ್ಮ ಮುಂದಿದೆ.
ಇದನ್ನು ಬರೆದು ಮುಗಿಸುವಷ್ಟರಲ್ಲಿ ಎಲ್ಲೋ ಮನದಒಂದು ಮೂಲೆಯಲ್ಲಿ ಜೋಗಿಯವರ ಮಾತುಗಳು ಪ್ರತಿಧ್ವನಿಸುತ್ತಾ ಇದ್ದವು. ನಾನೂ ಕೂಡ ಆ ಸರಕಿಗಾಗಿ ಹಳ್ಳಿಗೆ ಹೋಗಲು ಮನ ಮಿಡಿಯುತ್ತಿತ್ತು….












Click it and Unblock the Notifications