ಲೋಕಪೀಠ: ಕಾಂಗ್ರೆಸ್ಸನ್ನು ಬುಟ್ಟಿಗೆ ಹಾಕಿಕೊಳ್ಳುವ ಬಿಜೆಪಿ ತಂತ್ರ

ಜಾತಿಯ ಹಿತದೃಷ್ಟಿಯಿಂದ ಬನ್ನೂರುಮಠ ನೇಮಕಕ್ಕೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಅಸ್ತು ಎಂದಿರಲಿಲ್ಲ. ಆದರೆ ಲಿಂಗಾಯತ ಸಮುದಾಯದ ಅಧಿನಾಯಕನಂತೆ ರಾರಾಜಿಸುತ್ತಿರುವ ಯಡಿಯೂರಪ್ಪ ಅವರು ಬನ್ನೂರುಮಠ ಹೆಸರನ್ನೇ ಲೋಕಾಯುಕ್ತ ಪೀಠಕ್ಕೆ ಸೂಚಿಸಿದ್ದರು. ಯಡಿಯೂರಪ್ಪ ನಿರ್ದೇಶಿತ ಮುಖ್ಯಮಂತ್ರಿ ಸದಾನಂದರಿಗೂ ಬನ್ನೂರುಮಠ ಅವರ ಮೇಲೆ ಹೆಚ್ಚು ಒಲವಿತ್ತು.
ಬಲಿಪೀಠ: ಆದರೆ ಮೂರು ತಿಂಗಳ ಈ ಹಗ್ಗಜಗ್ಗಾಟಕ್ಕೆ ಮೇಲ್ಮನೆ ಚುನಾವಣೆ ಹೇತುವಾಗಿದ್ದು, ಮಾಗಿಯ ಚಳಿಯಲ್ಲೂ ice-breaking ಆಗಿದೆ ಅನ್ನಿಸುತ್ತಿದೆ. ಹಾಗೆ ನೋಡಿದರೆ, ಆರಂಭದಲ್ಲೇ ಬನ್ನೂರುಮಠ ನೇಮಕಕ್ಕೆ ಕಾಂಗ್ರೆಸ್ ಕೊಂಕು ತೆಗೆದಿತ್ತು. ಲಿಂಗಾಯತ ಸಮುದಾಯವನ್ನು ಓಲೈಸುವ ಯಡಿಯೂರಪ್ಪ ತಂತ್ರಕ್ಕೆ ಮಣೆಹಾಕದಿರಲು ಕಾಂಗ್ರೆಸ್ ಪಟ್ಟುಹಿಡಿದಿತ್ತು.
ಆದರೆ ಈಗ ಚುನಾವಣೆ ಸಮಯ... ಸ್ವತಃ ಸದಾನಂದ ಗೌಡರೇ ಅವಿರೋಧವಾಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಉಮೇದಿಗೆ ಬಿದ್ದಿದ್ದಾರೆ. ಈಗಾಗಲೇ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಆದರೆ ಒಂದು ಕಾಂಗ್ರೆಸ್ ಪಕ್ಷ ಮಾತ್ರ ತೊಡರುಗಾಲು ಹಾಕುತ್ತಿದ್ದಂತೆ ಅದನ್ನು ಸಂಭಾಳಿಸುವ ನಿಟ್ಟಿನಲ್ಲಿ ಇದೀಗ ಸದಾನಂದ ಗೌಡರು ಬನ್ನೂರುಮಠಗೆ ಕೈಕೊಟ್ಟು ಹಸ್ತದತ್ತ ಕೈಚಾಚಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ರಿಂಗಣಿಸುತ್ತಿದೆ.
ಚುನಾವಣೆ ಕಾಲೇ ಕಾಂಗ್ರಸ್ಸನ್ನು ಸಂತೃಪ್ತಗೊಳಿಸಿದರೆ ತಮ್ಮ ಆಯ್ಕೆ ಸಲೀಸು ಎಂದೆಣಿಸಿರುವ ಗೌಡರು ಇದೀಗ ಲೋಕಾಯುಕ್ತ ದಾಳವನ್ನು ಉರುಳಿಸಿದ್ದಾರೆ. ಗೌಡರು ಯಶಸ್ವಿಯಾಗುತ್ತಾರಾ? ವಿಫಲವಾದರೆ ಬನ್ನೂರುಮಠ ಕಾರ್ಡನ್ನು ಮತ್ತೆ ಝಳಪಿಸುವ ಸದವಕಾಶ ಬಳಸಿಕೊಂಡರಾಯಿತು ಎಂಬ ಲೆಕ್ಕಾಚಾರವೂ ಇದೆ.
ಎಲ್ಲವೂ ಬಿಜೆಪಿ ಲೆಕ್ಕಾಚಾರದಂತೆ ನಡೆದರೆ ನಿಷ್ಕಳಂಕ (ನಿಜಕ್ಕೂ ಇದು ನಮ್ಮ ದೌರ್ಭಾಗ್ಯ. ಇನ್ನಾದರೂ ಈ ಪದ ಬಳಕೆ ನಿಲ್ಲಲಿ ಎಂಬ ಆಶಯವಿದೆ) ನ್ಯಾ. ಎನ್ ಕೆ ಸೋಧಿ ಅವರು ಈ ವಾರಾಂತ್ಯವೇ ಲೋಕಾಯುಕ್ತ ಪೀಠಕ್ಕೆ ಏರುವುದನ್ನು ನೋಡಿ ಕರ್ನಾಟಕದ ಜನತೆ ಸಂಭ್ರಮಿಸಬಹುದು.












Click it and Unblock the Notifications