ಹೃದಯಾಘಾತ : ಹೈಕೋರ್ಟ್ ನ್ಯಾ. ಸಭಾಹಿತ್ ನಿಧನ

ಕೋರ್ಟ್ ಕೋಣೆ 3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ. ಸಭಾಹಿತ್ ಅವರು ಕಚೇರಿಯಲ್ಲಿ ಹೃದಯ ಸ್ತಂಭನಕ್ಕೊಳಗಾಗಿದ್ದಾರೆ. ಕೂಡಲೆ ಅವರ ಕೋಣೆಗೆ ಇತರ ನ್ಯಾಯಮೂರ್ತಿಗಳೂ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅವರನ್ನು ಫಾರ್ಟಿಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು.
ನವೆಂಬರ್ 26ರಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದ ನ್ಯಾ. ಸಭಾಹಿತ್ ಅವರು 1979ರಲ್ಲಿ ವಕೀಲ ವೃತ್ತಿ ಸೇರಿ ಕರ್ನಾಟಕ ಹೈಕೋರ್ಟಿನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರು. ಅವರ ತಂದೆ ನ್ಯಾ. ಜಿ.ಎಸ್ ಸಭಾಹಿತ್ ಕೂಡ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು.
1988ರಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದ ಅವರನ್ನು, 2000ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. 2001 ಜುಲೈನಲ್ಲಿ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡ ಅವರು 2017ರಲ್ಲಿ ನಿವೃತ್ತರಾಗುವವರಿದ್ದರು.
ಕಳೆದ ವರ್ಷ 11 ಭಿನ್ನಮತೀಯ ಶಾಸಕರು ದಂಗೆಯೆದ್ದಿದ್ದಾಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಭಿನ್ನ ತೀರ್ಪನ್ನು ನೀಡಿತ್ತು. ಆಗ ಆ ಪ್ರಕರಣವನ್ನು ನ್ಯಾ. ವಿ.ಜಿ. ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು. ಅ.29ರಂದು ನೀಡಿದ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು ನ್ಯಾ.ಸಭಾಹಿತ್ ಎತ್ತಿಹಿಡಿದಿದ್ದರು.












Click it and Unblock the Notifications