ಮೇಲ್ಮನೆ : ಡಿವಿಎಸ್‌ಗೆ ಬಿಎಸ್‌ವೈ ತೊಡರುಗಾಲು

ಬಲ್ಲ ಮೂಲಗಳ ಪ್ರಕಾರ, ವಿಧಾನ ಪರಿಷತ್ತಿನ ಸ್ಥಾನಕ್ಕೆ ನಾಮಪತ್ರವನ್ನು ಸೋಮವಾರ ಸಲ್ಲಿಸುತ್ತಿರುವ ಸದಾನಂದ ಗೌಡರ ಕಾಲುಕೆಳಗಿನ ಕಾರ್ಪೆಟ್ ಎಳೆಯಲು ಯಡಿಯೂರಪ್ಪನವರು ಎಲ್ಲ ಕಾರ್ಯತಂತ್ರಗಳನ್ನು ಹೂಡುತ್ತಿದ್ದಾರೆ. ನಾಮಪತ್ರ ಸಲ್ಲಿಸದಂತೆ ಡಿವಿಎಸ್ ಗೆ ಕಟ್ಟೆಚ್ಚರಿಕೆಯನ್ನೂ ಬಿಎಸ್ ವೈ ಕೊಟ್ಟಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಡಿವಿಎಸ್ ನಾಮಪತ್ರ ಸಲ್ಲಿಸಿ ಜಯಶಾಲಿಯಾದರೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಮಣ್ಣುಗೂಡಿದಂತೆ ಎಂಬುದು ಯಡಿಯೂರಪ್ಪನವರ ಕಳವಳಕ್ಕೆ ಮುಖ್ಯ ಕಾರಣ. ಹೀಗಾಗಿ ಭಾನುವಾರದೊಳಗೆ ವರಿಷ್ಠರಿಗೆ ಮನವೊಲಿಕೆ ಮಾಡಿಕೊಟ್ಟು ಕಣದಿಂದ ಹಿಂದೆ ಸರಿಯುವಂತೆ ಗೌಡರಿಗೆ ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ. ಡಿವಿಎಸ್ ದ್ವಂದ್ವದಲ್ಲಿ ಮುಳುಗಿದ್ದಾರೆ.
2ಜಿ ತರಂಗಗುಚ್ಛ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಪಿ ಚಿದಂಬರಂ ಅವರೇ ಸ್ಥಾನ ಕಾಪಾಡಿಕೊಂಡಿರುವಾಗ ತಾವೇಕೆ ಮತ್ತೆ ಮುಖ್ಯಮಂತ್ರಿಯಾಗಬಾರದು ಎಂಬ ವಾದ ಅವರದು. ಕೆಲ ದಿನಗಳ ಹಿಂದೆ, ಗೌಡ, ಈಶ್ವರಪ್ಪ ಮುಂತಾದವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ತಮ್ಮನ್ನೇ ಮುಖ್ಯಮಂತ್ರಿ ಮಾಡಿದರೆ ಬಿಜೆಪಿಗೆ ಉಳಿಗಾಲ, ಇಲ್ಲದಿದ್ದರೆ ಕೊನೆಗಾಲ ಎಂದು ಎಚ್ಚರಿಕೆ ಅವರು ನೀಡಿದ್ದರು.
ಒಂದೆಡೆ, ಶ್ರೀರಾಮುಲು ಅವರೇ ಸ್ವತಃ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿಕೊಂಡು ಸದಾನಂದ ಗೌಡರನ್ನು ಸೋಲಿಸಲು ತಂತ್ರಗಾರಿಕೆ ನಡೆಸಿರುವಾಗ, ಬಿಜೆಪಿಗೆ ಪಕ್ಷದಲ್ಲಿಯೇ ಅಡತಡೆಗಳು ಎದುರಾಗುತ್ತಿವೆ. ಒಂದು ವೇಳೆ ಗೌಡರು ಯಡಿಯೂರಪ್ಪನನ್ನು ಧಿಕ್ಕರಿಸಿ ನಾಮಪತ್ರಪತ್ರ ಸಲ್ಲಿಸಿದ್ದೇ ಆದಲ್ಲಿ, ಬಳ್ಳಾರಿ ಗ್ರಾಮೀಣ ಉಪಚುನಾವಣೆಯಲ್ಲಿ ಆದ ಮುಖಭಂಗ, ಈ ಬಾರಿ ನೇರವಾಗಿ ಯಡಿಯೂರಪ್ಪನವರ ಮುಖಾಂತರ ಆಗುವುದು ನಿಶ್ಚಿತ ಎಂಬ ಮಾತು ವಿಧಾನಸೌಧದಿಂದ ತೇಲಿ ಬರುತ್ತಿವೆ.











Click it and Unblock the Notifications