ತಿಪ್ಪಗೊಂಡನಹಳ್ಳಿಗೆ ಹೇಮಾವತಿ ನೀರು ಹರಿಸ್ತಾರಂತೆ ಡುಂಡುಂ

ಪರ್ಯಾಯ ಜಲಮೂಲ ಗುರುತಿಸಲು ರಚಿಸಲಾಗಿದ್ದ ತಜ್ಞರ ಸಮಿತಿ ಡಿಸೆಂಬರ್ ಅಂತ್ಯಕ್ಕೆ ಮಧ್ಯಂತರ ವರದಿ ನೀಡಲಿದ್ದು, ಅದರಲ್ಲಿ ಈ ಪ್ರಸ್ತಾವನೆಯೂ ಇದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ಇದರ ಜತೆಗೆ 1448.62 ಚದರ ಕಿ.ಮೀ. ಇರುವ ತಿಪ್ಪಗೊಂಡನಹಳ್ಳಿ ಸುತ್ತಮುತ್ತಲ ಹೆಸರಘಟ್ಟ, ಕುಮುದ್ವತಿ, ಅರ್ಕಾವತಿ ಜಲಾನಯನ ಪ್ರದೇಶಗಳ ಅಭಿವೃದ್ಧಿಪಡಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ನೀರು ಅವಶ್ಯಕವಾಗಿದೆ. ಆದರೆ, ತಿಪ್ಪಗೊಂಡನಹಳ್ಳಿ ಭಾಗದಲ್ಲಿ ಹೆಚ್ಚಿನ ಮಳೆ ಬೀಳುತ್ತಿಲ್ಲ. ಹೀಗಾಗಿ ಪರ್ಯಾಯ ಮಾರ್ಗ ಹುಡುಕಬೇಕಿದೆ. ಜತೆಗೆ ಅಲ್ಲಿ ಒತ್ತುವರಿಯದ್ದೇ ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ಸುರೇಶ್‌ಕುಮಾರ್ ಒಪ್ಪಿಕೊಂಡರು.
ಜೆಡಿಎಸ್ ಸದಸ್ಯ ಇ.ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 12 ಇಲಾಖೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಕುಮುದ್ವತಿ-ಅರ್ಕಾವತಿ ಪ್ರಾಧಿಕಾರ ರಚನೆ ಮಾಡಿ ಆ ಎಲ್ಲ ಇಲಾಖೆಗಳ ಕಾರ್ಯನಿರ್ವಹಣೆ ಪ್ರಾಧಿಕಾರದ ವ್ಯಾಪ್ತಿಗೆ ತರಲಾಗುವುದು. ಅರ್ಕಾವತಿ ನದಿಯ ಪುನಶ್ಚೇತನಕ್ಕಾಗಿ 22.43 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯ ಅಶ್ವತ್ಥನಾರಾಯಣ್ ಮಾತನಾಡಿ, ಸರ್ಕಾರ ನದಿ ಪಾತ್ರ ಅಭಿವೃದ್ಧಿಗೆ ಮುಂದಾಗಿದ್ದರೆ ಆ ಭಾಗದಲ್ಲೇ ಬೈಪಾ, ಬಿಎಂಆರ್ ಡಿಎ, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರ ಹೊಸ ಬಡಾವಣೆಗಳಿಗೆ ಅನುಮೋದನೆ ನೀಡುತ್ತಿವೆ. ಕೆಐಎಡಿಬಿ ಸಹ ಕೈಗಾರಿಕೆಗಳಿಗೆ ಅನುಮತಿ ನೀಡುತ್ತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಬಡಾವಣೆಗಳಿಗೆ ಅನುಮೋದನೆ ನೀಡದಂತೆ ಸೂಚಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications