ಬಿಜೆಪಿ ಸೋಲಿಗೆ ಕೆಎಸ್ ಈಶ್ವರಪ್ಪ ಕಾರಣವಂತೆ!

ಸರಿಯಾಗಿ ಲೆಕ್ಕ ಹಾಕಿದರೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಇದೆ ಎನ್ನಬಹುದು. ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಸಂಪೂರ್ಣವಾಗಿ ತನ್ನ ಹಿಡಿತವನ್ನು ಕಳೆದುಕೊಂಡಿದೆ.
ಶ್ರೀರಾಮುಲು ಗೆಲುವಿಗೆ ಸಾವಿರ ಕಾರಣ ಕೊಡಬಹುದಾದರೂ ಠೇವಣಿ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿ ಮಟಮಟ ಮಧ್ಯಾಹ್ನ ಬಿಜೆಪಿಯ ಬಟ್ಟೆ ಹರಿದು ಹಂಚುವಂತೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಎಲ್ಲರ ಬೊಟ್ಟು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರತ್ತ ತೋರಿಸುತ್ತದೆ.
* ಆತುರದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾದ ಈಶ್ವರಪ್ಪ ಅವರು ಜೈಲಿನಲ್ಲಿದ್ದ ಯಡಿಯೂರಪ್ಪ ಅವರ ಮಾತು ಕೇಳದೆ ಗಾದಿ ಲಿಂಗಪ್ಪ ಅವರನ್ನು ಕಣಕ್ಕಿಳಿಸಿದ್ದು ಮೊದಲ ತಪ್ಪು.
* ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಉಪ ಚುನಾವಣೆಗಳು ನಡೆದಿದ್ದು 13ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದರಲ್ಲಿ ಎರಡನೇ ಸ್ಥಾನ ಪಡೆದಿತ್ತು. ಆಗ ಯಡಿಯೂರಪ್ಪ ಅವರ ನಾಯಕತ್ವ ಇತ್ತು.
* ಆದರೆ ಸ್ವಪ್ರತಿಷ್ಠೆ ಮೆರೆಯಲು ಇದು ಸಕಾಲ ಎಂದು ತಿಳಿದ ಈಶ್ವರಪ್ಪ ಅವರು ಸಾಮೂಹಿಕ ನಾಯಕತ್ವದ 'ಕಾನ್ ಸೆಪ್ಟ್' ತಂದು ಎಲ್ಲರನ್ನೂ ಗೊಂದಲಕ್ಕೆ ದೂಡಿದರು.
* ಕೊಪ್ಪಳದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಗೆದ್ದರೂ ಒಪ್ಪಿಕೊಳ್ಳಲು ಮನಸ್ಸಿಲ್ಲದೆ, ಅವರ ಜನಪ್ರಿಯತೆಯನ್ನು ಕಡೆಗಾಣಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಬೇಕಂತಲೇ ತಡವಾಗಿ ಬಳ್ಳಾರಿಗೆ ಬಂದ ಯಡಿಯೂರಪ್ಪ ಅವರು ಪ್ರಚಾರ ಮಾಡಿದ ಪರಿ ಎಲ್ಲರಿಗೂ ಗೊತ್ತಿದೆ.
* ಶ್ರೀರಾಮುಲು ನಿಂತ ಬಿಜೆಪಿ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ್ದು ತಾಂತ್ರಿಕವಾಗಿ ಸರಿಯಾದ ನಿರ್ಣಯ ಎನ್ನಬಹುದಾದರೂ, ದೂರಾಲೋಚನೆ ಇಲ್ಲದ ಆತುರದ ಕ್ರಮ ಎಂಬುದು ಈಗ ಸ್ಪಷ್ಟವಾಗಿದೆ.
* ಇಂದಲ್ಲ ನಾಳೆ ಶ್ರೀರಾಮುಲು ಹೊಸ ಪಕ್ಷ ಕಟ್ಟುತ್ತಾರೆ. ಜನಾರ್ದನರೆಡ್ಡಿ ಜೈಲಿನಿಂದ ಹೊರಬರುತ್ತಾರೆ. ಆಗ ಅವರ ಹಿಂದೆ 30 ರಿಂದ 40 ಜನ ಶಾಸಕರು ಹೋದರೆ ಬಿಜೆಪಿ ಗತಿ ಏನಾಗಲಿದೆ ಎಂಬುದರ ಸಣ್ಣ ಅರಿವು ಕೂಡಾ ಇಲ್ಲದಂತೆ ಈಶ್ವರಪ್ಪ ವರ್ತಿಸಿದ್ದು ಈಗ ಮುಳುವಾಗಿದೆ.
* ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಸುಧಾಕರ್ ಜೊತೆ ಗುಪ್ತ ಮಾತುಕತೆ ನಡೆಸಿರುವ ಈಶ್ವರಪ್ಪ ಮತ್ತೆ ಮುಖಭಂಗ ಅನುಭವಿಸಲಿದ್ದಾರೆ ಎಂದು ಹೇಳುತ್ತಿರುವುದು ವಿರೋಧ ಪಕ್ಷದವರಲ್ಲ, ಬಿಜೆಪಿಯ ನಿಷ್ಠಾವಂತರು ಎಂಬುದನ್ನು ಮರೆಯುವಂತಿಲ್ಲ.












Click it and Unblock the Notifications