ವಿದೇಶಿ ಚಿಲ್ಲರೆ ಅಂಗಡಿ ವಿರುದ್ಧ ಸಿಡಿದೆದ್ದ ಕರ್ನಾಟಕ

ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ.51ರಷ್ಟು ಮತ್ತು ಸಿಂಗಲ್ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ.100ರಷ್ಟು ವಿದೇಶಿ ಚಿಲ್ಲರೆ ಬಂಡವಾಳ ಹೂಡಲು ಕೇಂದ್ರ ಯುಪಿಎ ಸರಕಾರ ಅವಕಾಶ ಮಾಡಿಕೊಟ್ಟಿರುವುದು ಭಾರತದ ರಿಟೇಲ್ ವ್ಯಾಪಾರಿಗಳನ್ನು ರೊಚ್ಚಿಗೆಬ್ಬಿಸಿದೆ.
ಬೆಂಗಳೂರಿನಲ್ಲಿ ಹೊಟೇಲು, ಚಿನ್ನಾಭರಣ ಅಂಗಡಿ, ಎಪಿಎಂಸಿ ಮಾರುಕಟ್ಟೆಗಳು ಸೇರಿದಂತೆ ಎಲ್ಲ ವಾಣಿಜ್ಯ ಮಳಿಗೆಗಳು ಬಂದ್ ಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಸದಾ ಗಿಜಿಗುಡುತ್ತಿದ್ದ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಇಂದು ಪಡ್ಡೆಗಳಿಗೆ ಕ್ರಿಕೆಟ್ ಆಡಲು ಲಾಯಕ್ಕಾದ ಮೈದಾನದಂತಿತ್ತು.
ಬೆಂಗಳೂರಿನ ವ್ಯಾಪಾರಸ್ಥರು ಮೆರವಣಿಗೆ ಕೈಗೊಂಡು ವಿದೇಶಿ ನೇರ ಬಂಡವಾಳ ಹೂಡಿಕೆಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಬಂಡವಾಳ ಹೂಡಿಕೆಗೆ ಅವಕಾಶ ನೀಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಟ್ಟಿನಲ್ಲಿ ಅರಿವಿಲ್ಲದೆ ಅಂಗಡಿಗೆ ಹೋದ ಗ್ರಾಹಕರಿಗೆ ಎಲ್ಲೆಡೆ ಬಂದಾದ ಶಟರ್ ಗಳು ಸ್ವಾಗತಿಸುತ್ತಿದ್ದವು.
ಚಿಕ್ಕಪೇಟೆ, ಬಳೆಪೇಟೆ, ಜಯನಗರದ ಬೀದಿಗಳಲ್ಲಿ ಅಲ್ಲಲ್ಲಿ ಕೆಲ ಅಂಗಡಿಗಳು, ಹೊಟೇಲುಗಳು ಅರ್ಧ ಬಾಗಿಲು ತೆರೆದುಕೊಂಡಿದ್ದರೂ, ಅನೇಕ ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆಯಲೇ ಇಲ್ಲ. ಮಂಜಾಗ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ಯಾವ ಕಡೆಯೂ ಅಹಿತಕರ ಘಟನೆಗಳು ನಡೆದ ವರದಿ ಬಂದಿಲ್ಲ. ಎಲ್ಲೆಡೆ ಶಾಂತಿಯುತವಾಗಿ ಬಂದ್ ಆಚರಿಸಲಾಗಿದೆ.












Click it and Unblock the Notifications