ಠಾಕ್ರೆ-ಗೌಡ ಭೇಟಿ : ಸಿಎಂ ವಿರುದ್ಧ ಕನ್ನಡಿಗರ ಕಿಡಿ

ಆದರೆ, ಈ ಭೇಟಿಯಾಗುವ ಸಂಗತಿ ಕನ್ನಡಿಗರಲ್ಲಿ ಮತ್ತಷ್ಟು ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಕನ್ನಡಿಗರನ್ನು ಅವಮಾನಿಸುತ್ತಿರುವ ಬಾಳಾ ಠಾಕ್ರೆಯನ್ನು ಭೇಟಿಯಾಗುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನಿಸಿರುವ ಕನ್ನಡಿಗರು, ಇದು ನಮ್ಮ ಸ್ವಾಭಿಮಾನವನ್ನು ಪಣಕ್ಕಿಟ್ಟು ದೌರ್ಬಲ್ಯ ಪ್ರದರ್ಶಿಸಿದಂತೆ ಆಗುತ್ತದೆ ಎಂದು ಕನ್ನಡದ ಕಟ್ಟಾಳುಗಳು ಕಿಡಿಕಾರಿದ್ದಾರೆ.
ಇದೆಲ್ಲ ಪ್ರಾರಂಭವಾಗಿದ್ದು ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಬೆಳಗಾವಿ ಮರಾಠಿ ಮೇಯರ್ ಮಂದಾ ಬಾಳೆಕುಂದ್ರಿ ಕಂಬಾರರನ್ನು ಗೌರವಿಸದೆ ಅವಮಾನಿಸಿದಾಗ. ಮುಂದೆ ಕನ್ನಡ ರಾಜ್ಯೋತ್ಸವದ ದಿನ ಮರಾಠಿಗರು ಕರಾಳ ದಿನ ಆಚರಿಸಿದರು. ಪ್ರತಿಯಾಗಿ ಕನ್ನಡಿಗರು ಪಾಲಿಕೆ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದರು. ನಂತರ ಠಾಕ್ರೆ ಅವರು, ಕಂಬಾರರ ಸೊಂಟ ಮುರಿಯಬೇಕೆಂದು ಕರೆ ನೀಡಿ ಬೆಂಕಿಗೆ ತುಪ್ಪು ಸುರಿದಿದ್ದರು.
ಈ ತ್ವೇಷದ ವಾತಾವರಣವನ್ನು ತಿಳಿಯಾಗಿಸಲು ಮತ್ತು ಕನ್ನಡ ಮರಾಠಿ ನಡುವೆ ಸೌಹಾರ್ದಯುತ ಸಂಬಂಧ ಮರುಕಳಿಸುವಂತೆ ಮಾಡಲು ಠಾಕ್ರೆಯವರನ್ನು ಭೇಟಿಯಾಗಿ ಶಾಶ್ವತ ಪರಿಹಾರ ಕಂಡುಹಿಡಿಯುವುದಾಗಿ ಸದಾನಂದ ಗೌಡ ಬುಧವಾರ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಕರಾಳ ದಿನ ಆಚರಿಸಿದ್ದಕ್ಕಾಗಿ ಮೇಯರ್ ಮತ್ತು ಉಪಮೇಯರ್ ಗೆ ನೋಟೀಸ್ ನೀಡಲಾಗಿದೆ. ಉತ್ತರ ಬಂದ ನಂತರ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಗೌಡರಿಗೆ ಬುದ್ಧಿಭ್ರಮಣೆ : ಕನ್ನಡಿಗರನ್ನು ಕೆಣಕುತ್ತಿರುವ ಮರಾಠಿಗರ ವಿರುದ್ಧ ಕಠಿಣ ನಿಲುವು ತಾಳುವ ಬದಲು ಮೃದು ಧೋರಣೆ ತಾಳುತ್ತಿರುವ ಸದಾನಂದ ಗೌಡರಿಗೆ ಮತಿಭ್ರಮಣೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಕಠಿಣ ಮಾತುಗಳನ್ನು ಆಡಿದ್ದಾರೆ. ಕನ್ನಡಿಗರ ಆಶೋತ್ತರಗಳನ್ನು ಬದಿಗೊತ್ತಿ ಗೂಂಡಾ ಬಾಳಾ ಠಾಕ್ರೆಯನ್ನು ಭೇಟಿಯಾಗುವ ಅವಶ್ಯಕತೆಯಿಲ್ಲ ಎಂದು ಕಿಡಿ ಕಾರಿದ್ದಾರೆ.
ವಾಟಾಳ್ ಕಿಡಿನುಡಿ : ಕನ್ನಡಿಗರ ಸ್ವಾಭಿಮಾನವನ್ನು ಬದಿಗೊತ್ತಿ ಮುಖ್ಯಮಂತ್ರಿಗಳು ಕನ್ನಡ ವಿರೋಧಿ ಬಾಳಾ ಠಾಕ್ರೆಯನ್ನು ಭೇಟಿಯಾಗಿದ್ದೇ ಆದಲ್ಲಿ, ಕನ್ನಡನಾಡಿನಾದ್ಯಂತೆ ಉಗ್ರ ಚಳವಳಿ ಆರಂಭಿಸುವುದಾಗಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ. ಸದಾನಂದ ಗೌಡರ ಬಗ್ಗೆ ಗೌರವವಿದೆ. ಆದರೆ, ಕನ್ನಡ ನಾಡುನುಡಿಯ ವಿಚಾರದಲ್ಲಿ ರಾಜಿಯಾಗುತ್ತಿರುವುದು ನಾಡದ್ರೋಹ ಬಗೆದಂತೆ ಎಂದು ಖಾರವಾಗಿ ನುಡಿದಿದ್ದಾರೆ.












Click it and Unblock the Notifications