ಯಡಿಯೂರಪ್ಪಗೆ ಶುಶ್ರೂಷೆ, ಸಚಿವೆ ಶೋಭಾಗೆ ಚಾನ್ಸಿಲ್ಲ

ನಗರದ ಖಾಸಗಿ ಆಸ್ಪತ್ರೆ ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೂ ನಾಲ್ಕೈದು ದಿನ ಚಿಕಿತ್ಸೆ ಪಡೆಯಲಿದ್ದು, ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಈ ಮಧ್ಯೆ ಯಡಿಯೂರಪ್ಪ ಅವರ ಹಿತೈಷಿ ಶೋಭಾ ಕರಂದ್ಲಾಜೆ ಅವರನ್ನು ಯಡಿಯೂರಪ್ಪ ಅವರಿಂದ ದೂರವಿಡುವಲ್ಲಿ ಯಡಿಯೂರಪ್ಪ ಕುಟುಂಬ ಯಶಸ್ವಿಯಾಗಿದೆ.
ಜೈಲಿನಿಂದ ಹೊರ ಬಂದ ಬಳಿಕ ಯಡಿಯೂರಪ್ಪ ಅವರು ಮತ್ತೆ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಜನರ ಬಳಿಗೆ ಹೋಗುತ್ತಾರೆ. ಈ ಸಮಯದಲ್ಲಿ ನೀವು ಅವರ ಜೊತೆ ಕಾಣಿಸಿಕೊಂಡರೆ ಜನರಿಗೆ ತಪ್ಪು ಕಲ್ಪನೆ ನೀಡುತ್ತದೆ. ದಯವಿಟ್ಟು ಕೆಲ ತಿಂಗಳು ಅವರ ಹಿಂದೆ ಮುಂದೆ ಓಡಾಡುವುದನ್ನು ಬಿಟ್ಟು ಬಿಡಿ ಎಂದು ಶೋಭಾಗೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ.
ಸದಾ ತಮ್ಮ ರಾಜಕೀಯ ಗುರು ಯಡಿಯೂರಪ್ಪರ ಹಿತವನ್ನೇ ಬಯಸುವ ಶೋಭಾ ಕೂಡ ಇದಕ್ಕೆ ಪೂರಕವಾಗಿಯೆ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದುಃಖ ನುಂಗಿಕೊಂಡು ತಮ್ಮ ಇಲಾಖೆಯ ಕೆಲಸ ಗಳಲ್ಲಿ ಬ್ಯುಸಿಯಾಗಿದ್ದಾರೆ.
ಆದರೆ, ಈ ಹಿಂದೆ ಯಡಿಯೂರಪ್ಪರ ಪರವಾಗಿ ಪೂಜೆ, ಹೋಮ ಹವನಗಳನ್ನೂ ನಡೆಸಿದ್ದ ಶೋಭಾ ಕರಂದ್ಲಾಜೆ ಅವರು ಮತ್ತೆ ದೇವರ ಮೊರೆ ಹೋಗುವ ಸಾಧ್ಯತೆಯಿದೆ. ಸದ್ಯಕ್ಕಂತೂ ಯಡಿಯೂರಪ್ಪ ಅವರ ಶುಶ್ರೂಷೆ ಮಾಡುವ ಭಾಗ್ಯ ಶೋಭಾ ಅವರಿಗೆ ಇಲ್ಲ.












Click it and Unblock the Notifications