ನಿಧಿ ಶೋಧಕರ ದುರಾಸೆಗೆ ಬಲಿಯಾದನೆ ಬಾಲಕ?

ಯಾದಗಿರಿಯ ಬಡಿಗೇರಿ ನಗರದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿರುವ ರಾಜಶೇಖರ್ ಅವರ ಮೊದಲನೆ ಮಗ ಸುರೇಶ ಜುಲೈ ತಿಂಗಳಲ್ಲಿ ಕಾಣೆಯಾಗಿದ್ದಾನೆ. ಎಸ್.ಎಸ್.ಎಲ್.ಸಿ ಪಾಸಾಗಿದ್ದ ಸುರೇಶ್ ತಮ್ಮ ಅಂಗಡಿಯಿಂದ ಇದ್ದಕ್ಕಿಂದಂತೆ ನಾಪತ್ತೆಯಾದ. ಪೊಲೀಸರಿಗೂ ದೂರು ನೀಡಲಾಗಿತ್ತು.
ಆದರೆ, ಅಷ್ಟರಲ್ಲಿಯೇ ವಂಚಕರ ಜಾಲವೊಂದು ಕಾರ್ಯತತ್ಪರವಾಗಿದೆ. 'ನಿಮ್ಮ ಮಗನ ಕೈಯಲ್ಲಿ ನಿಧಿ ಶೋಧಕ್ಕೆ ಸಹಾಯವಾಗುವಂಥ ಹಸಿರು ನರವಿದೆ. ಪೂಜೆ ಪುನಸ್ಕಾರ ಮಾಡಿದರೆ ಅವನನ್ನು ಅಪಹರಿಸಿದ ಗ್ಯಾಂಗ್‌ನಿಂದ ಆತನನ್ನು ವಾಪಸ್ ಕರೆತರಬಹುದು' ಎಂದು ಪುಸಲಾಯಿಸಿ 5 ಸಾವಿರ ರು. ಆತನಿಂದ ಕಿತ್ತಿದ್ದಾರೆ.
ಪೂಜೆ ಮಾಡಿಸಿದ್ದೂ ಆಯಿತು, ವಂಚಕರ ಕೈಗೆ 5 ಸಾವಿರ ರು. ಕೊಟ್ಟು ಮೋಸ ಹೋದಿದ್ದೂ ಆಯಿತು. ಮಗ ಮಾತ್ರ ಪತ್ತೆಯಿಲ್ಲ. ಬೇಸತ್ತ ರಾಜಶೇಖರ ಅವರು ಪೂಜೆ ಮಾಡಿಸಿದ ಸೋಮಯ್ಯ ಸ್ವಾಮಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಸೋಮಯ್ಯನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆಯಲ್ಲಿ ಅಬ್ದುಲ್ ಹಾಗೂ ಭಾಷಾ ಎನ್ನುವವರ ಬಗ್ಗೆ ಸೋಮಯ್ಯ ಮಾಹಿತಿ ನೀಡಿದ್ದಾನೆ. ಪೊಲೀಸರು ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸತ್ಯ ಸಂಗತಿ ಇನ್ನೂ ಹೊರಬರಬೇಕಿದೆ. ಸುಳ್ಳು ಹೇಳಿ ಹಣ ಕಿತ್ತ ಸೋಮಯ್ಯ ಮತ್ತಿತರರ ವಿರುದ್ಧ ಚೀಟಿಂಗ್ ಕೇಸ್ ಬುಕ್ ಮಾಡಲಾಗಿದೆ ಎಂದು ಎಸ್‌ಪಿ ಡಿ.ರೂಪಾ ಹೇಳಿದ್ದಾರೆ.












Click it and Unblock the Notifications