ಪಕ್ಷ ವಿರೋಧಿ ಚಟುವಟಿಕೆ : ಶಾಂತಾ, ಫಕೀರಪ್ಪ ವಜಾ

ಈ ನಡೆ ನಿರೀಕ್ಷಿತವಾದದ್ದೆ. ಆದರೆ ತಡವಾಗಿಯಾದರೂ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಶಾಂತಾ ಮತ್ತು ಫಕೀರಪ್ಪ ವಿರುದ್ಧ ಬಿಜೆಪಿ ಕಠಿಣ ಕ್ರಮ ತೆಗೆದುಕೊಂಡಿದೆ. ಸುಷ್ಮಾ ಸ್ವರಾಜ್ ಅವರಿಂದ ಆದೇಶ ಬಂದ ಕೂಡಲೆ ಅವರಿಬ್ಬರನ್ನು ವಜಾ ಮಾಡಿರುವುದಾಗಿ ಬಳ್ಳಾರಿಯಲ್ಲಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ವರಿಷ್ಠ ಎಲ್ ಕೆ ಅಡ್ವಾಣಿ ಅವರ ಅನುಮತಿ ಪಡೆದೇ ಈ ಆದೇಶ ಹೊರಡಿಸಲಾಗಿದೆ.
ಶ್ರೀರಾಮುಲು ತಂಗಿ ಶಾಂತಾ ಮತ್ತು ಫಕೀರಪ್ಪ ಬಹಿರಂಗವಾಗಿ ಬಿಜೆಪಿಯನ್ನು ಧಿಕ್ಕರಿಸಿ ಪಕ್ಷದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಕೂಡ ಶ್ರೀರಾಮುಲು ನಾಮಪತ್ರ ಸಲ್ಲಿಸುವಾಗ ಜೊತೆಗಿದ್ದರೂ, ಹಿರಿಯ ನಾಯಕರು ಕೆಂಗಣ್ಣು ಬೀರಿದ ಮೇಲೆ ಪ್ರಚಾರದಿಂದ ಹಿಂದೆ ಸರಿದಿದ್ದರು ಮತ್ತು ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು.
ಶ್ರೀರಾಮುಲುವನ್ನು ಪ್ರತ್ಯಕ್ಷವಾಗಿ ಬೆಂಬಲಿಸಿದ ಸೋಮಶೇಖರ ರೆಡ್ಡಿ, ಪರೋಕ್ಷವಾಗಿ ಬೆಂಬಲಿಸುತ್ತಿರುವ ಕರುಣಾಕರ ರೆಡ್ಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಪಕ್ಷ ಯಾಕೋ ಹಿಂದೇಟು ಹಾಕುತ್ತಿದೆ. ಸದ್ಯಕ್ಕಂತೂ ಬಳ್ಳಾರಿಯಲ್ಲಿ ಪ್ರಚಾರದ ಭರಾಟೆ ಭರದಿಂದ ಸಾಗಿದೆ. ನವೆಂಬರ್ 30ರಂದು ಮತದಾನ ನಡೆಯಲಿದೆ ಮತ್ತು ಡಿಸೆಂಬರ್ 4ರಂದು ಮತ ಎಣಿಕೆ ಆಗಲಿದೆ.












Click it and Unblock the Notifications