ಯಾದಗಿರಿಯಲ್ಲಿ ಬೈಕ್ ಓಡಿಸುವವರದ್ದೇ ದಾದಾಗಿರಿ!

ಯಾದಗಿರಿ ಜಿಲ್ಲೆಯಲ್ಲಿ ಬೈಕ್ಗಳ ನಂಬರ್ ಪ್ಲೇಟ್ ಮೇಲೆ A-Zವರೆಗೂ ಅಕ್ಷರಗಳು ಕಾಣ ಸಿಗುತ್ತಿವೆ. ಆದರೆ ನಂಬರ್ ಪ್ಲೇಟ್‌ಗಳಲ್ಲಿ ಗಾಡಿಗಳ ನಂಬರ್ ಮಂಗಮಾಯ. ವಾಹನಕ್ಕೆ ಅಪಘಾತ ಸಂಭವಿಸಿದರೆ ಪೊಲೀಸರು ಯಾರನ್ನಂತ ಹಿಡಿಯೋದು? ಇಷ್ಟು ಮಾತ್ರವಲ್ಲ, ಮಾಧ್ಯಮಗಳಿಗೆ ಸಂಬಂಧವಿಲ್ಲದೇ ಇರುವರು ಸಹ ಪ್ರೆಸ್ ಎನ್ನುವ ಬೋರ್ಡ್‌ಗಳನ್ನು ಹಾಕಿಕೊಂಡು ತಿರುಗುತ್ತಾರೆ.
ಯಾದಗರಿ ಜಿಲ್ಲೆಯಾಗಿ ಎರಡು ವರ್ಷ ಆಗುತ್ತಾ ಬಂತು. ಜಿಲ್ಲೆಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ. ಇದಕ್ಕೆ ಸಾರಿಗೆ ಇಲಾಖೆನೂ ಹೊರತಾಗಿಲ್ಲ. ಯುವಕರು ಬೈಕ್‌ಗಳ ಮೇಲೆ ವಿವಿಧ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ನಾಮಫಲಗಳು ಈಗ ಬೈಕ್‌ಗಳ ನಂಬರ್ ಪ್ಲೇಟ್‌ಗಳಿಗೆ ಅಂಟಿಕೊಳ್ಳುತ್ತಿವೆ.
ತಮ್ಮ ಮಕ್ಕಳ ಹೆಸರು ಹಾಗು ಇಷ್ಟ ದೇವರ ಹೆಸರನ್ನು ಸಹ ಹಾಕಿಕೊಂಡು ತಿರುಗಾಡುತ್ತಾರೆ. ಕೆಲವರು ತಾವು ಕೆಲಸ ಮಾಡುವ ಕಚೇರಿಯ ಹೆಸರನ್ನು ಸಹ ಹಾಕಿಕೊಂಡು ತಿರುಗುತ್ತಾರೆ. ಸ್ಟೇಶನ್ ರಸ್ತೆ, ಸುಭಾಶ ಚೌಕ್, ಶಾಸ್ತ್ರೀ ಚೌಕ್, ಗಾಂಧೀ ಚೌಕ್‌ಗಳಲ್ಲಿ ಈಂತಹ ಬೈಕ್‌ಗಳ ಕಾರುಬಾರು ಜಾಸ್ತಿನೇ. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಅದರ ಮೇಲೆ ಓಡಾಡುವವರ ಪೋಸೇನು, ಠೀವಿಯೇನು? ಅಲ್ಲದೇ ನೆರೆಯ ಗಡಿಭಾಗದಲ್ಲಿ ಆಂಧ್ರಪ್ರದೇಶ ಇರುವುದರಿಂದ ಅಲ್ಲಿನ ಗಾಡಿಗಳು ಸಹ ಹೆಚ್ಚೆಚ್ಚು ತಿರುಗುತ್ತವೆ.
ಯಾದಗಿರಿ ನಗರದಲ್ಲಿ ಬೈಕ್‌ಗಳದೇ ಕಾರುಬಾರು. ಈ ಬೈಕ್‌ಗಳಲ್ಲಿ ತಿರುಗಾಡುವರಿಗೆ ಯಾರದೇ ಭಯವಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ. ಆದರೆ ಸಾರಿಗೆ ಇಲಾಖೆ ಅಧಿಕಾರಿ ಉತ್ತರಿಸುವುದು ಬೇರೆ. ನಮ್ಮಲ್ಲಿ ಅಧಿಕಾರಿಗಳ ಕೊರತೆ ಇದೆ. ಆದರೂ ಸಹಿತ ಸಾರಿಗೆ ಇಲಾಖೆಗೆ ವಿರೋಧವಾಗಿ ವಿವಿಧ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಓಡಾಡುವವರನ್ನು ಹಿಡಿದು ದಂಡ ಹಾಕಲಾಗುತ್ತದೆ ಎನ್ನುತ್ತಾರೆ.
ನಾಕಾಣೆ ಟ್ರಾಫಿಕ್ ಪೊಲೀಸ್ ಠಾಣೆ : ಯಾದಗಿರಿ ಜಿಲ್ಲೆಯಾಗಿ ಎರಡು ವರ್ಷಗಳು ಕಳೆಯುತ್ತಾ ಬಂದರು ಟ್ರಾಫಿಕ್ ಪೊಲೀಸ್ ಠಾಣೆ ಇನ್ನೂ ಇಲ್ಲ. ಒಂದೇ ಬೈಕಿನ ಮೇಲೆ 3-4 ಜನ ಕೂತು ತಿರುಗಾಡುವುದು ಇಲ್ಲಿ ಸರ್ವೇಸಾಮಾನ್ಯ. ಇನ್ನು ಮುಂದೆಯಾದರೂ ಕುಂಭಕರ್ಣ ನಿದ್ರೆಯನ್ನು ಬಿಟ್ಟು ಆರ್‌ಟಿಓ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎನ್ನುವುದು ಸಾರ್ವಜನಿಕರ ಆಶಯ.












Click it and Unblock the Notifications