ಪ್ರಚಾರಕ್ಕೆ ಬಿಎಸ್ವೈ ಬರುವುದು ಖಚಿತ : ಡಿವಿಎಸ್

ನ.20ರಂದು ವೈಷ್ಣೋದೇವಿ ದರುಶಕ್ಕೆ ತೆರಳಿದ್ದ ಯಡಿಯೂರಪ್ಪ ಇಂದಿನಿಂದ ಬಳ್ಳಾರಿಯಲ್ಲಿ ಪ್ರಚಾರ ಕೈಗೊಳ್ಳಬೇಕಾಗಿತ್ತು. ವೈಷ್ಣೋದೇವಿಯಿಂದ ವಾಪಸ್ ಬರುತ್ತಲೇ ಅವರು ಜ್ವರ ಹಿಡಿದುಕೊಂಡಿದ್ದರಿಂದ ಪ್ರಚಾರಕ್ಕೆ ಹೋಗುತ್ತಾರೋ ಇಲ್ಲವೋ ಎಂದು ಸುದ್ದಿ ಹಬ್ಬಿತ್ತು. ಯಡಿಯೂರಪ್ಪ ಮತ್ತೆ ಕೈಕೊಟ್ಟರಾ ಎಂಬ ಸಂಶಯ ಕಾಡುತ್ತಿತ್ತು.
ಈ ಎಲ್ಲ ಸಂಶಯಗಳಿಗೆ, ಊಹಾಪೋಹಗಳಿಗೆ ಕೊನೆ ಹಾಡಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು, ಯಡಿಯೂರಪ್ಪ ಖಂಡಿತ ಪ್ರಚಾರಕ್ಕೆ ಬರುತ್ತಾರೆ. ನಾಳೆಯಿಂದ ಬಿಜೆಪಿ ಪರ ಪ್ರಚಾರ ಆರಂಭಿಸಲಿದ್ದಾರೆ. ಅವರು ಬರುವುದಿಲ್ಲ ಎಂಬ ಊಹಾಪೋಹ ಸುಳ್ಳು ಎಂದು ರಾಷ್ಟ್ರದ ರಾಜಧಾನಿಯಲ್ಲಿ ತಿಳಿಸಿದರು.
ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ : ನನ್ನ ಬೆಂಬಲಿಗ ಶಾಸಕರೆಲ್ಲ ರಾಜೀನಾಮೆ ನೀಡಿದರು ಬಿಜೆಪಿ ಸರಕಾರ ಬಿದ್ದುಹೋಗುತ್ತದೆ ಎಂದು ಶ್ರೀರಾಮುಲು ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸದಾನಂದ ಗೌಡ, ಯಾರೂ ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ಫಲಿತಾಂಶ ಏನಾಗುತ್ತದೆಂದು ಅವರಿಗೆಲ್ಲ ತಿಳಿದಿದೆ ಎಂದರು.
ಬೆಂಬಲ ಹಿಂಪಡೆಯುವ, ಭಿನ್ನಮತ ಹುಟ್ಟುಹಾಕುವ ನಾಟಕಕ್ಕೆ ಕೈಹಾಕಿದರೆ ಏನಾಗುತ್ತದೆಂದು ಹಿಂದೆ ಎಲ್ಲರೂ ಕಂಡಿದ್ದಾರೆ. ಹೀಗಾಗಿ ಕೆಲವರನ್ನು ಹೊರತುಪಡಿಸಿದರೆ ಯಾರೂ ಶ್ರೀರಾಮುಲುಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ. ಪಕ್ಷದ ಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications