'ದೇವರ' ಅನುಮತಿಗಾಗಿ ಕಾದಿರುವ ಯಡಿಯೂರಪ್ಪ!

ಹೀಗೆ ಅನುಮತಿಗಾಗಿ ಯಡಿಯೂರಪ್ಪ ಕಾದು ಕುಳಿತಿರುವುದು ರಾಜ್ಯದ ಬಿಜೆಪಿ ನಾಯಕರಿಗೂ ಅಲ್ಲ, ಹೈಕಮಾಂಡ್‌ಗೂ ಅಲ್ಲ. ತಾವು ನಡೆದಿದ್ದೇ ಹಾದಿ ಎಂದು ಸಾಗುತ್ತಿರುವ ಯಡಿಯೂರಪ್ಪ ಕಾದು ಕುಳಿತಿರುವುದು ತಾವು ಅಪಾರವಾಗಿ ನಂಬುವ ಮತ್ತು ಏಕೈಕ ನಂಬುಗೆಯ 'ದೇವರ' ಅನುಮತಿಗಾಗಿ!
ಆಶ್ಚರ್ಯವೆಂದರೂ ಇದು ಸತ್ಯ. ಸದ್ಯಕ್ಕೆ ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ ಯಾವ ಮನುಷ್ಯನ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲದ ಯಡಿಯೂರಪ್ಪ, ದೇವರು ಅನುಮತಿ ಕೊಟ್ಟರೆ ಮಾತ್ರ ಬಳ್ಳಾರಿ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತಾರಂತೆ. ಯಾವ 'ದೇವರು'? ಯಡಿಯೂರಪ್ಪನವರೇ ಹೇಳಬೇಕು.
ದೇವರ ಅನುಮತಿ ಯಾವ ರೀತಿ ಕೇಳಲಿದ್ದಾರೆ ಎಂಬುದು ಇನ್ನೂ ಗುಟ್ಟಿನ ವಿಷಯ. ಚೀಟಿ ಹಾಕುತ್ತಾರಾ? ಬಲಗಡೆಯಿಂದ ಹೂವು ಬೀಳುವುದನ್ನೇ ಕಾಯುತ್ತಾರಾ? ದೇವರು ಪ್ರತ್ಯಕ್ಷನಾಗಲೆಂದೇ ಕಾಯುತ್ತಿದ್ದಾರಾ? ತಿಳಿದಿಲ್ಲ. ಆದರೆ, ಬಿಜೆಪಿ ನಾಯಕರನ್ನು ಮಾತ್ರ ಭಾರೀ ದಿಗಿಲಿಗೆ ಬೀಳಿಸಿದ್ದಾರೆ. ಯಡಿಯೂರಪ್ಪನವರ ವರಸೆ ನೋಡಿ ದೇವರು ದಿಗಿಲು ಬಿದ್ದರೂ ಆಶ್ಚರ್ಯವಿಲ್ಲ.
ಅಲ್ಲದೆ, ರಾಷ್ಟ್ರೀಯ ನಾಯಕರು ಯಡಿಯೂರಪ್ಪನವರನ್ನು ಅವಗಣಿಸುತ್ತಿರುವುದು ಅವರ ಮುಖದಲ್ಲಿ ನರಗಳು ಬಿಗಿಯುವಂತೆ ಮಾಡಿದೆ. ಏನಾದ್ರೂ ಮಾಡಿಕೊಳ್ಳಿ ಎಂದು ಹಿರಿಯ ನಾಯಕರು ಸುಮ್ಮನೆ ಕುಳಿತಿರುವುದು ಯಡಿಯೂರಪ್ಪನವರ ಅಸಹನೆಯನ್ನು ಇನ್ನೂ ಹೆಚ್ಚಿಸುತ್ತಿದೆ. ಹಿರಿಯರಿಂದ 'ಹಿತವಾದ ಸಂದೇಶ' ಬಂದರೆ ಮಾತ್ರ ಚುನಾವಣಾ ಪ್ರಚಾರಕ್ಕೆ ಸೈ, ಇಲ್ಲದಿದ್ದರೆ ಬಿಜೆಪಿಗೆ ಕೈ.












Click it and Unblock the Notifications