ಶ್ರೀರಾಮುಲು ವಿರುದ್ಧ ಪ್ರಚಾರಕ್ಕೆ ಯಡಿಯೂರಪ್ಪ ರೆಡಿ

"ಬಳ್ಳಾರಿಯಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ. ಶ್ರೀರಾಮುಲು ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲ್ಲಲೇಬೇಕು. ಬಳ್ಳಾರಿಯ ಶಾಸಕರು ಕೂಡ ನಮ್ಮ ಜೊತೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂಬ ವಿಶ್ವಾಸವಿದೆ" ಎಂದು ಗುರುವಾರ ಇಲ್ಲಿ ನಡೆದ ಬಿಜೆಪಿಯ ಪಕ್ಷದ ಸಭೆಯ ನಂತರ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
ಭೂ ಹಗರಣದಲ್ಲಿ ಜಾಮೀನು ಸಿಗದೆ ಜೈಲು ಸೇರಿದಾಗಿನಿಂದ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದ ಯಡಿಯೂರಪ್ಪ ಬಳ್ಳಾರಿ ಗ್ರಾಮೀಣ ಚುನಾವಣೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಚಾರಕ್ಕೆ ಬರದೆ ಪರೋಕ್ಷವಾಗಿ ಶ್ರೀರಾಮುಲುವನ್ನು ಯಡಿಯೂರಪ್ಪ ಬೆಂಬಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಈ ಎಲ್ಲ ಊಹಾಪೋಹಗಳಿಗೆ ಮಂಗಳ ಹಾಡಿರುವ ಯಡಿಯೂರಪ್ಪ ನ.21ರಿಂದ 23ರವರೆಗೆ ಬಳ್ಳಾರಿಯಲ್ಲಿ ಝೇಂಡಾ ಊರಿ ಗಾದಿ ಲಿಂಗಪ್ಪ ಪರವಾಗಿ ಪ್ರಚಾರ ಮಾಡಲಿದ್ದಾರೆ. ನಂತರ 25ರಿಂದ 27ರವರೆಗೆ ಎರಡನೇ ಹಂತದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು 20ರಂದು ತಮ್ಮ ನೆಚ್ಚಿನ ವೈಷ್ಣೋದೇವಿ ದರ್ಶನವನ್ನು ಯಡಿಯೂರಪ್ಪ ಮಾಡಲಿದ್ದಾರೆ. ನ.30ರಂದು ಮತದಾನ ನಡೆಯಲಿದೆ.
ಶ್ರೀರಾಮುಲು ನಾಮಪತ್ರ ಸಲ್ಲಿಸುವಾಗ ಅವರ ಜೊತೆ ಉಪಸ್ಥಿತರಿದ್ದು ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಕೂಡ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಭಾಗವಹಿಸಿದ್ದ ಇಂದಿನ ಸಭೆಯಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರತಿ ಸಭೆಯಲ್ಲಿ ಗೈರಾಗುತ್ತಿದ್ದ ಯಡಿಯೂರಪ್ಪನವರ ಹಿಂಬಾಲಕ ಶಾಸಕರು ಪಾಲ್ಗೊಂಡಿದ್ದರು.
ಯಾರೇ ಬರಲಿ ನನಗೇ ಗೆಲುವು : ಪ್ರಚಾರಕ್ಕೆ ಯಡಿಯೂರಪ್ಪನವರೇ ಬರಲಿ, ಯಾರೇ ಬರಲಿ ಗೆಲುವು ನನ್ನದಾಗಲಿದೆ. ಬಳ್ಳಾರಿ ಗ್ರಾಮೀಣ ಜನ ನನ್ನ ಕೈಬಿಡುವುದಿಲ್ಲ ಎಂದು ಶ್ರೀರಾಮುಲು ಇಡೀ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಪ್ರಚಾರದಲ್ಲಿ ಯಡಿಯೂರಪ್ಪನವರ ಪಾಲ್ಗೊಳ್ಳುವಿಕೆಯಿಂದ ಚುನಾವಣಾ ಕಣ ಭಾರೀ ರಂಗೇರಲಿದೆ. ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್ ಕೂಡ ಮತ ಯಾಚಿಸಲು ಶುರು ಮಾಡಿದ್ದಾರೆ.












Click it and Unblock the Notifications