ಜಾಮೀನು ನಿರಾಕರಣೆ ಕಾನೂನು: ಮರುಪರಿಶೀಲನೆಗೆ ಸುಪ್ರೀಂ ನಿರ್ಧಾರ

'ಸಂವಿಧಾನದಡಿ ಜೀವನ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು ಉಲ್ಲಂಘಿಸುತ್ತಿವೆ' ಎಂದು ಹಿರಿಯ ವಕೀಲರಾದ ರಂಜಿತ್ ಕುಮಾರ್ ಮತ್ತು ಮುಕುಲ್ ರೋಹಟ್ಗಿ ದೂರು ನೀಡಿದ ಹಿನ್ನೆಲೆಯಲ್ಲಿ ಇಂತಹ ಮಹತ್ವದ ಹಾಗೂ ವಿವಾದಾತ್ಮಕ ಪ್ರಕರಣಗಳ ಕುರಿತು ಪರಿಶೀಲಿಸುವುದಾಗಿ ನ್ಯಾ. ಅಲ್ತಮಸ್ ಕಬೀರ್, ಎಸ್‌ಎಸ್ ನಿಜ್ಜರ್ ಮತ್ತು ಚಲಮೇಶ್ವರ ಅವರ ವಿಭಾಗೀಯ ಪೀಠ ಒಪ್ಪಿಗೆ ಸೂಚಿಸಿದೆ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾರ ಸಹವರ್ತಿಯಾಗಿರುವ ಅಶೋಕ್ ಕುಮಾರ್ ಸಿನ್ಹಾ, ತಾನು ಮಾಡಿರುವ ಸಣ್ಣ ತಪ್ಪಿಗೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದು, ವಿಚಾರಣಾ ನ್ಯಾಯಾಲಯ ಇಂತಹ ಕೆಲ ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದು, ಇದಕ್ಕೆ ಮಾಧ್ಯಮಗಳ ವರದಿಯೇ ಕಾರಣವಾಗಿದೆ ಎಂದು ಸಿನ್ಹಾ ಪರ ವಕೀಲ ರಂಜಿತ್ ಕುಮಾರ್ ಆರೋಪಿಸಿ ಮನವಿ ಸಲ್ಲಿಸಿದರು.
ಪ್ರಕರಣಗಳು ಕೋರ್ಟ್ ಮುಂದೆ ವಿಚಾರಣೆ ಹಂತದಲ್ಲಿರುವಾಗ ಮಾಧ್ಯಮಗಳು ಆ ಬಗ್ಗೆ ವರದಿ ಮಾಡಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದರಿಂದ ನ್ಯಾಯಾಧೀಶರು ಜಾಮೀನು ನೀಡಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ತ್ರಿಸದಸ್ಯರ ಪೀಠ ಈ ಬಗ್ಗೆ ಸ್ಪಷ್ಟ ಕಾನೂನನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರೀಯ ಅಬಕಾರಿ ಕಾನೂನು ಉಲ್ಲಂಘನೆ ಸಂಬಂಧಿತ ಪ್ರಕರಣಗಳಿಗೆ ಪೀಠವು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದೇ ರೀತಿ ಮಾರ್ಗಸೂಚಿಗಳನ್ನು ಇತರೆ ಪ್ರಕರಣಗಳಲ್ಲಿ ಅಳವಡಿಸಿಕೊಳ್ಳಲು ಪರಿಶೀಲನೆ ನಡೆಸಲಾಗುವುದು ಎಂದ ಪೀಠ, ಮುಂದಿನ ವಿಚಾರಣೆಯನ್ನು 2012ರ ಜನವರಿ 18ಕ್ಕೆ ಮುಂದೂಡಿತು.












Click it and Unblock the Notifications