ನಮ್ಮ ಬೆಂಗಳೂರು ಪ್ರಶಸ್ತಿಗೆ ಮತಹಾಕಿದ ಮೂರ್ತಿ

ಎಲೆಮರೆಯ ಕಾಯಿಯಂತೆಯೇ ಇದ್ದುಕೊಂಡು, ಕರ್ಮವನ್ನೇ ದೇವರೆಂದುಕೊಂಡು ಸಮಾಜದ ಒಳಿತಿಗಾಗಿ, ಅದರಲ್ಲೂ ಬೆಂಗಳೂರಿನ ಅಭಿವೃದ್ಧಿಗಾಗಿ ದುಡಿಯುತ್ತಿರುವ 'ಶ್ರೀಸಾಮಾನ್ಯ'ನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಂಸದ ರಾಜೀವ್ ಚಂದ್ರಶೇಖರ್ ಈ ಪ್ರಶಸ್ತಿಯನ್ನು ಆರಂಭಿಸಿದ್ದಾರೆ. 2009ರಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಆರಂಭಿಸಿದ ಪ್ರತಿಷ್ಠಿತ ಪ್ರಶಸ್ತಿಯನ್ನು ಸತತ ಮೂರನೇ ವರ್ಷ ಆಯೋಜಿಸಲಾಗುತ್ತಿದೆ. ಕಳೆದ ವರ್ಷ 2010ರಲ್ಲಿ 14 ಸಾವಿರಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದು ಇದರ ಯಶಸ್ಸಿನ ಸಂಕೇತ.
ನಮ್ಮ ಬೆಂಗಳೂರು ಪ್ರತಿಷ್ಠಾನದ ಈ ಅಭಿಯಾನವನ್ನು ಬೆಂಬಲಿಸಿರುವ ಅನಂತಮೂರ್ತಿಯವರು, "ಪ್ರತಿಷ್ಠಾನ ಅತ್ಯುತ್ತಮ ಹೆಜ್ಜೆಯನ್ನು ಮುಂದಿಟ್ಟಿದೆ. ವಿಲಿಯಂ ವರ್ಡ್ಸ್‌ವರ್ತ್ ಅವರ, 'ಯಾರಿಗೂ ತಿಳಿಯದಂತೆ ಮಾಡುವ ಸಣ್ಣ ಉಪಕಾರಗಳು ಮತ್ತು ತೋರುವ ಪ್ರೀತಿ ಆತನ ಜೀವನದ ಅತ್ಯುತ್ತಮ ಭಾಗ'" ಎಂಬ ನುಡಿಗಳನ್ನು ನೆನೆಸಿಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ನಮ್ಮ ಕಣ್ಣ ಮುಂದಿದ್ದುಕೊಂಡೇ ಅನೇಕ ಜನ, ಸಂಸ್ಥೆಗಳು ನಿರಂತರವಾಗಿ ಸೇವೆಯನ್ನು ಗೈದಿವೆ ಎಂದು ಅನಂತಮೂರ್ತಿಯವರು ಪ್ರಶಂಸೆಯ ಮಳೆ ಸುರಿಸಿದ್ದಾರೆ.
ಸಂಗೀತ ನಿರ್ದೇಶಕ ಮತ್ತು ನಟ ಗುರು ಕಿರಣ್ ಅವರು ಕೂಡ ತಮ್ಮ ಆಯ್ಕೆಯ ಸಾಮಾನ್ಯರ ನಡುವಿರುವ ಅಸಾಮಾನ್ಯ 'ಹೀರೋ'ನನ್ನು ನಾಮನಿರ್ದೇಶನ ಮಾಡಿದ್ದು, "ಸಂಗೀತ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ದಿಗ್ಗಜರನ್ನು ಸನ್ಮಾನಿಸುವುದು ಸಾಮಾನ್ಯ ಸಂಗತಿ. ಆದರೆ, ಅತ್ಯಂತ ಪ್ರಾಮಾಣಿಕವಾಗಿರುವ ಮತ್ತು ಪ್ರತಿಫಲಾಪೇಕ್ಷೆಯಿಲ್ಲದೆ ಕಾಯಕವೇ ಕೈಲಾಸ ಎಂದು ದುಡಿಯುತ್ತಿರುವ ಸಾಮಾನ್ಯರನ್ನು ಗುರುತಿಸುವುದು ಬಲು ಕಷ್ಟ. ಎಲ್ಲ ನಾಗರಿಕರು ಈ ಅಭಿಯಾನದಲ್ಲಿ ಭಾಗವಹಿಸಬೇಕು" ಎಂದು ಕರೆ ನೀಡಿದ್ದಾರೆ. ಚಿತ್ರನಟ ಮಾಸ್ಟರ್ ಕಿಶನ್ ಕೂಡ ತಮ್ಮ ಆಯ್ಕೆಯ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ್ದಾರೆ.
ಜನಸಾಮಾನ್ಯರೂ ತಮ್ಮ ಆಯ್ಕೆಯ ವ್ಯಕ್ತಿಯನ್ನು ಕಪ್ಪಾ, ಫುಡ್ ವರ್ಲ್ಡ್, ಕೆಫೆ ಕಾಫಿ ಡೇ, ಬೆಂಗಳೂರು ಒನ್ ಕೇಂದ್ರ, ಅಮ್ಮೀಸ್ ಬಿರಿಯಾನಿ, ಲ್ಯಾಂಡ್‌ಮಾರ್ಕ್‌ಗಳಲ್ಲಿ ದೊರೆಯುವ ಫಾರ್ಮ್ ಭರ್ತಿ ಮಾಡಿ ನಾಮನಿರ್ದೇಶನ ಮಾಡಬಹುದು. ಆನ್ ಲೈನ್ ಮುಖಾಂತರವೂ ಆಯ್ಕೆ ಮಾಡಬಹುದಾಗಿದೆ. ನಾಮನಿರ್ದೇಶನ ಫಾರ್ಮ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದು.












Click it and Unblock the Notifications