ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ನೀರಲ್ಲಿ ಮುಳುಗಿ ಸಾವು : ಜಾಲಹಳ್ಳಿಯ ಮದರ್ ತೆರೆಸಾ ಶಾಲೆಯಲ್ಲಿ ಓದುತ್ತಿದ್ದ 8 ವರ್ಷದ ತೇಜಸ್ ರೆಸಾರ್ಟಲ್ಲಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮಕ್ಕಳನ್ನು ಶಾಲೆಯಿಂದ ನೆಲಮಂಗಲ ಬಳಿಯ ಟಿ.ಬೇಗೂರಿನಲ್ಲಿರುವ ರೆಸಿಡೆನ್ಸಿ ಹಾಲಿಡೇ ರೆಸಾರ್ಟಿಗೆ ಪಿಕ್ನಿಕ್ಕಿಗೆಂದು ಕರೆದೊಯ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಟವಾಡುತ್ತಿದ್ದ ಸಮಯದಲ್ಲಿ ತೇಜಸ್ ನೀರಿಗೆ ಬಿದ್ದಿದ್ದಾನೆ. ಆತನನ್ನು ನೀರಿನಿಂದೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೇಜಸ್ ಬದುಕುಳಿಯಲಿಲ್ಲ. ಮಕ್ಕಳನ್ನು ಸಂತಸಗೊಳಿಸಲೆಂದು ಆಯೋಜಿಸಲಾಗಿದ್ದ ಪಿಕ್ನಿಕ್ ದುರಂತದಲ್ಲಿ ಕೊನೆಗೊಂಡಿದೆ.
ಯುವ ಗಾಯಕ ನೇಣಿಗೆ ಶರಣು : ಓದಿನ ಕಡೆ ಲಕ್ಷ್ಯ ಕೊಡು, ಸಂಗೀತ ಆಮೇಲೆ ಎಂದು ತಂದೆ ತಾಯಿಯರು ಮಗನಿಗೆ ಅಪ್ಪಣೆ ಕೊಡಿಸಿದ್ದೇ ತಪ್ಪಾಯಿತು. ಓದಿಗಿಂತ ಗಾಯಕನಾಗಿ ಮಿಂಚಬಯಸಿದ್ದ, ಬಿಬಿಎಂ ಓದುತ್ತಿದ್ದ ಆದಿತ್ಯ ನಾಡಿಗ್ ಮುನಿಸಿಕೊಂಡು ಉರುಳು ಹಾಕಿಕೊಂಡು ಇಹಲೋಕದ ವ್ಯಾಪಾರಕ್ಕೆ ಬೈಬೈ ಹೇಳಿದ್ದಾನೆ.
ಚಿಕ್ಕಂದಿನಿಂದಲೂ ಸಂಗೀತವನ್ನು ಪೂಜಿಸಿ ಆರಾಧಿಸುತ್ತಿದ್ದ ಆದಿತ್ಯನಿಗೆ ಮುಂಬೈನಲ್ಲಿ ಹಾಡುವ ಅವಕಾಶ ಕೂಡಿಬಂದಿತ್ತು. ಆದರೆ, ಪಾಲಕರಿಗೆ ಅವನನ್ನು ಮುಂಬೈಗೆ ಕಳಿಸಲು ಇಷ್ಟವಿರಲಿಲ್ಲ. ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಆದಿತ್ಯ ಇಟ್ಟಮಡುನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಓದಿಗೆ ಮಾತ್ರವಲ್ಲ ಸಂಗೀತಕ್ಕೂ ಗುಡ್ ಬೈ ಹೇಳಿದ್ದಾನೆ.












Click it and Unblock the Notifications