ಕಳಂಕಿತ ಸಚಿವರೂ ಬಸವನಗುಡಿ ವೇದಿಕೆಯಲ್ಲಿ ರಾರಾಜಿಸಲಿದ್ದಾರೆ!

'ಸಮಾವೇಶದ ವೇದಿಕೆಯಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೂ ಉಪಸ್ಥಿತರಿರುತ್ತಾರೆ'ಎಂದು ಸಭೆಯ ಉಸ್ತುವಾರಿ ಹೊತ್ತಿರುವ ಸಂಸದ ಪ್ರಹ್ಲಾದ ಜೋಷಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ, ಭೂ ಹಗರಣದಲ್ಲಿ ತಾಜಾ ಆರೋಪಿಗಳಾಗಿರುವ ಗೃಹ ಸಚಿವ ಅಶೋಕ್ ಮತ್ತು ಕೈಗಾರಿಕೆ ಸಚಿನ ಮುರುಗೇಶ್ ನಿರಾಣಿ ಅವರುಗಳು ವೇದಿಕೆ ಹಂಚಿಕೊಳ್ಳುವುದು ಖಚಿತವಾಗಿದೆ.
ಇವರ ಜೊತೆ ಸ್ಥಳೀಯ ಸಂಸದರು, ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು, ಬೆಂಗಳೂರು ಮೇಯರ್ ಮತ್ತು ಉಪ ಮೇಯರ್ ಕೂಡ ಅಡ್ವಾಣಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಈ ಮಧ್ಯೆ, ಭಾನುವಾರ ಸಂಜೆ 5 ಗಂಟೆಗೆ ಆರಂಭವಾಗಲಿರುವ ಸಮಾವೇಶದ ಆಗುಹೋಗುಗಳನ್ನು ಇಂಟರ್ನೆಟ್ ಮೂಲಕ ನೇರ ಪ್ರಸಾರ ಮಾಡಲು ರಾಜ್ಯ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಸದಸ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಪಕ್ಷದ ವೆಬ್ ಸೈಟ್ (http://bjpkarnataka.org) ಮೂಲಕ ಜಗತ್ತಿನ ಯಾವುದೇ ಪ್ರದೇಶದಿಂದ ಬೆಂಗಳೂರಿನ ಸಮಾವೇಶ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಅದ್ದೂರಿ ಸ್ವಾಗತ: ಕೇರಳದ ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಭಾನುವಾರ ಸಂಜೆ ನಾಲ್ಕು ಗಂಟೆಗೆ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಡ್ವಾಣಿ ಅವರಿಗೆ ಮಹದೇವಪುರ ಮತ್ತು ಸಿ.ವಿ. ರಾಮನ್ ನಗರದ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಲಿದ್ದಾರೆ.
ಅಡ್ವಾಣಿ ಅವರ ಮಹತ್ವಾಕಾಂಕ್ಷೆಯ ಜನ ಚೇತನ ರಥಯಾತ್ರೆ ನಿಮಿತ್ತ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಉದ್ಯಾನ ನಗರಿ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಾವುಟ ಮತ್ತು ಅಡ್ವಾಣಿಯವರಿಗೆ ಸ್ವಾಗತ ಕೋರುವ ಕಟೌಟ್‌ಗಳನ್ನು ಹಾಕಲಾಗಿದೆ.











Click it and Unblock the Notifications