ಬಸವನಗುಡಿ ಸಭೆಗೂ ಮುನ್ನ ಜೈಲು ನಾಯಕರಿಗೆ ಹೂ ಕೊಟ್ಟ ಅಡ್ವಾಣಿ!

ಆದರೆ ಈ ದೃಶ್ಯಾವಳಿ ಭ್ರಷ್ಟಾಚಾರ ವಿರೋಧಿಸಿ ಬೆಂಗಳೂರಿಗೆ ಆಗಮಿಸುತ್ತಿರುವ ಅಡ್ವಾಣಿ ಅವರನ್ನು ಅಣಕಿಸುವ ಕಾಂಗ್ರೆಸ್ ಕಾರ್ಯಕರ್ತರ ಸಾಹಸವಷ್ಟೆ. ವಿನೂತನ ರೀತಿಯ ಈ ಪ್ರತಿಭಟನೆ ನೋಡಲು ಅಪಾರ ಸಂಖ್ಯೆಯ ಜನ ಸೇರಿದ್ದರು ಎಂಬುದು ಗಮನಾರ್ಹ.
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಕಾರಾಗೃಹಕ್ಕೆ ಭೇಟಿ ನೀಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಜನಾರ್ದನ ರೆಡ್ಡಿ ಅವರಿಗೆ ಕೈ ಕುಲುಕಿ ಅಭಿನಂದನೆ... ಎಲ್ಲರ ಮುಖದಲ್ಲೂ ಮಂದಹಾಸ...
ಕಾರಾಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ ಅವರನ್ನು ಬಂಧಿಗಳಂತೆ ತೋರಿಸಿ, ಅಡ್ವಾಣಿ, ಸಂಸದ ಅನಂತಕುಮಾರ್ ಮುಖವಾಡ ಹೊತ್ತವರು ಗುಲಾಬಿ ಹೂ ಕೊಟ್ಟು ಕೈ ಕುಲುಕಿದರು. 'ಅಡ್ವಾಣಿ' ಭದ್ರತೆಗೆ ಸ್ಟೆನ್‌ಗನ್ ಹಿಡಿದಿದ್ದ ಪಾತ್ರಧಾರಿಯೊಬ್ಬರು ಕೂಡ ನೋಡುಗರ ಗಮನ ಸೆಳೆದರು.
ನಗರದ ಮೌರ್ಯ ವೃತ್ತದಲ್ಲಿ (ಆನಂದರಾವ್ ಸರ್ಕಲ್ ) ಕೆಪಿಸಿಸಿ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯ ದೃಶ್ಯಗಳಲ್ಲಿ ಇದೆಲ್ಲ ಕಂಡುಬಂದಿತು. ಮಾಜಿ ಮೇಯರ್ ರಾಮಚಂದ್ರಪ್ಪ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಒಂದೆಡೆ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಮತ್ತೊಂದೆಡೆ ಭ್ರಷ್ಟಾಚಾರದ ವಿರುದ್ಧ ಅಡ್ವಾಣಿ ಅವರು ನಡೆಸುತ್ತಿರುವ ಜನಚೇತನ ರಾಜ್ಯ ಪ್ರವೇಶಿಸುತ್ತಿದೆ. ಇವೆರಡೂ ಬಿಜೆಪಿಯ ಇಬ್ಬಗೆ ನೀತಿಯ ಧ್ಯೋತಕವಾಗಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications