ಖರ್ಗೆ ಪುತ್ರಿ ಪ್ರಿಯದರ್ಶಿನಿಗೆ ಖಾರವಾದ ಸೈಟು

ಖರ್ಗೆ ಅವರ ಪುತ್ರಿ ಡಾ. ಪ್ರಿಯದರ್ಶಿನಿ ಅವರಿಗೆ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ(KSJDE HBCS)ದ ವತಿಯಿಂದ ಯಲಹಂಕದ ಅಲ್ಲಾಳಸಂದ್ರದಲ್ಲಿ 2002ರಲ್ಲಿ ವಸತಿ ನಿವೇಶನ ಮಂಜೂರು ಮಾಡಲಾಗಿದೆ.
ಆ ಅವಧಿಯಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಖರ್ಗೆ ಗೃಹಮಂತ್ರಿ ಆಗಿದ್ದರು. ಸಂಘದ ನಿಯಮ 10ನ್ನು ಉಲ್ಲಂಘಿಸಿ ಪ್ರಿಯದರ್ಶಿನಿಗೆ ನಿವೇಶನವನ್ನು ಪಡೆದಿರುವುದು ಸ್ಪಷ್ಟವಾಗಿದೆ.
ನಿಯಮ ಏನು ಹೇಳುತ್ತದೆ?: ಈ ನಿಯಮದ ಪ್ರಕಾರ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು ಮಾತ್ರ ನಿವೇಶನ ಪಡೆಯಲು ಅರ್ಹರಾಗಿರುತ್ತಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಪ್ರಿಯದರ್ಶಿನಿ ಇಲ್ಲಿ ಸದಸ್ಯತ್ವ ಪಡೆಯುವ ಸಾಧ್ಯತೆಗಳೇ ಇಲ್ಲ. ಆದರೂ ಅವರ ಹೆಸರಿನಲ್ಲಿ ನಿವೇಶನವನ್ನು ನೊಂದಾಯಿಸಲಾಗಿದ್ದು ಕ್ರಯಪತ್ರದಲ್ಲಿ ಅವರ ಸದಸ್ಯತ್ವ ಸಂಖ್ಯೆಯನ್ನೂ ನಮೂದಿಸಲಾಗಿಲ್ಲ ಎಂದು ಹೇಳಲಾಗಿದೆ.
ಬೈ ಲಾ ನಿಯಮ 53ರ ಪ್ರಕಾರ ನಿವೇಶನವನ್ನು ಸೀನಿಯಾರಿಟಿ ಅಧಾರದ ಮೇಲೆ ನಿವೇಶನ ಹಂಚಬೇಕಾಗುತ್ತದೆ. ನಿವೇಶನಾಕಾಂಕ್ಷಿಗಳು ತಮ್ಮ ಮೇಲಧಿಕಾರಿಗಳಿಂದ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಆದರೆ ನಿವೇಶನ ಪಡೆದ ವೇಳೆ ಪ್ರಿಯದರ್ಶಿನಿಯ ವಯಸ್ಸು ಕೇವಲ 25 ಆಗಿತ್ತು.
ಆದರೂ 3280 ಚದರಡಿಯ ನಿವೇಶನ ಸಂಖ್ಯೆ 1448, 1,96,837 ರೂಗಳಿಗೆ 20002ರ ಜನವರಿ 15ರಂದು ನೊಂದಣಿ ಮಾಡಿಸಲಾಗಿದೆ.
ಕ್ರಯಪತ್ರದಲ್ಲಿ ಪ್ರಿಯದರ್ಶಿನಿ ತಮ್ಮ ಕುಟುಂಬದ ಹೆಸರನ್ನು ನಮೂದಿಸಿಲ್ಲ. ತಮ್ಮ ಅಧಿಕೃತ ನಿವಾಸ ಎಂದು ನಂ. 289, 17ನೆ ಅಡ್ಡ ರಸ್ತೆ, 8ನೇ ಮುಖ್ಯರಸ್ತೆ ಸದಾಶಿವನಗರ ಎಂದು ಹೇಳಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಮನೆ ಅಡ್ರೆಸ್.
ಕಾನೂನು ಏನು ಹೇಳುತ್ತೆ?: 1991ರಲ್ಲಿ ನಡೆದ ನಾರಾಯಣರೆಡ್ಡಿ vs ರಾಜ್ಯ ಸರ್ಕಾರದ ನಡುವಿನ ಪ್ರಕರಣ: ನ್ಯಾ ರಾಮಾಜೋಯಿಸ್ ತೀರ್ಪು -ಯಾವುದೇ ಗೃಹ ನಿರ್ಮಾಣ ಸಂಘದ ನಿವೇಶನಗಳನ್ನು ಹಂಚುವಾಗ ಅದು ಸಂಘದ ಸದಸ್ಯರಿಗೆ ಮಾತ್ರ ನೀಡತಕ್ಕದ್ದು ಮತ್ತು ಹೊರಗಿನವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಅಧಿಕಾರ ಸಂಘಗಳಿಗೆ ಇರುವುದಿಲ್ಲ ಎಂದು ಆದೇಶಿಸಿದ್ದರು.
ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಈ ಪ್ರಕರಣವನ್ನು ಕುರಿತು ಖರ್ಗೆ ಪುತ್ರ ಪ್ರಿಯಾಂಕ್ ಅವರು ಹಾರಿಕೆಯ ಉತ್ತರ ನೀಡಿದ್ದು, ತಮ್ಮ ಸೋದರಿ ಊರಿನಲ್ಲಿಲ್ಲ. ನಿವೇಶನ ಹಿಂತಿರುಗಿಸಲಾಗಿದೆ ಎಂದಿದ್ದಾರೆ.











Click it and Unblock the Notifications