ಬೆಳಗಾವಿ ವಿ. ನಿಲ್ದಾಣದಲ್ಲಿ ವಜ್ರಾಭರಣಗಳ ಕಳ್ಳಸಾಗಾಟ ಬಲುಜೋರು

ಗಮನಾರ್ಹವೆಂದರೆ ಈ ಕಳ್ಳಮಾಲು ಮುಂಬೈಗೆ ಸಾಗಿಸಲಾಗುತ್ತಿತ್ತು. ಮತ್ತು ಪ್ರಕರಣದ ಸಂಬಂಧ ಬಂಧಿತರು ಮುಂಬೈ ಮೂಲದವರಾಗಿದ್ದಾರೆ. ಮುಂಬೈನ ಅಶುತೋಷ ಬಾಲಕೃಷ್ಣ ಧಬಕೆ (40), ಮಹೇಶ ಉಮಾಕಾಂತ ಪಾಂಡೆ (36), ಜಯವಂತ ಘಡಸಿ (35) ಬಂಧಿತರು.
ಮುಂಬೈನ ಖ್ಯಾತ ವಾಮನ ಹರಿ ಪೇಠೆ ಚಿನ್ನಾಭರಣ ಸಂಸ್ಥೆಗೆ ಸೇರಿದ ಕಳ್ಳಮಾಲು ಇದಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಶಪಡಿಸಿಕೊಳ್ಳಲಾದ ಕಳ್ಳಮಾಲನ್ನು ಪೊಲೀಸರು ಕೋರ್ಟ್ ಅಧೀನಕ್ಕೆ ಒಪ್ಪಿಸಿದ್ದಾರೆ.
ಅ. 10ರಂದು ಬೆಳಗಾವಿಗೆ ಬಂದಿದ್ದ ಮೂವರೂ ಸಾಂಬ್ರಾ ವಿಮಾನ ನಿಲ್ದಾಣದಿಂದ ಗುರುವಾರ ಮುಂಬೈ ವಿಮಾನವೇರಿ ವಾಪಸು ತೆರಳುತ್ತಿದ್ದ ವೇಳೆ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗಗೊಂಡಿದೆ.
ಮೂರು ಬ್ಯಾಗ್‌ಗಳಲ್ಲಿ 5.69 ಕೋಟಿಗೂ ಹೆಚ್ಚು ಮೌಲ್ಯದ 23.46 ಕೆ.ಜಿ ಚಿನ್ನದ ಆಭರಣ, 2.30 ಕೋಟಿ ರೂ.,ಗೂ ಹೆಚ್ಚು ಮೌಲ್ಯದ 2.39 ಕೆ.ಜಿ ವಜ್ರದ ಆಭರಣ ಸೇರಿ ಒಟ್ಟು 8.00 ರೂ.ಗಳಿಗಿಂತ ಹೆಚ್ಚು ಮೊತ್ತದ ಆಭರಣಗಳು ಮತ್ತು 25.62 ಲಕ್ಷ ರೂ.ಗಿಂತ ಹೆಚ್ಚು ನಗದು ಪತ್ತೆಯಾಗಿದೆ. ಆರೋಪಿಗಳ ಬಳಿಯಿದ್ದ ಸೂಟ್‌ಕೇಸ್ ಮತ್ತು ಬ್ಯಾಗ್‌ನಲ್ಲಿ ದೊರೆತಿರುವ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳು ದೊರೆತಿಲ್ಲ.
ಅಪಾರ ಪ್ರಮಾಣದ ಆಭರಣ ಹಾಗೂ ಹಣವನ್ನು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅವು ಯಾರಿಗೆ ಸೇರಿದ್ದಾಗಿವೆ ಎಂಬ ಬಗೆಗೆ ತನಿಖೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications