ಜಯಾ ಅಮ್ಮಾವ್ರ ವಿಚಾರಣೆ ನಾಳೆಗೆ ಮುಂದೂಡಿಕೆ

ಬಿಗಿ ಭದ್ರತೆಯಲ್ಲಿ 26 ಬೆಂಗಾವಲು ಕಾರಿನೊಂದಿಗೆ ನ್ಯಾಯಾಲಯ ಪ್ರವೇಶಿಸಿದ ಜಯಾ, ಜಡ್ಜ್ ಕೇಳಿದ ಸುಮಾರು 380 ಪ್ರಶ್ತ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು ಎನ್ನಲಾಗಿದೆ. ಸುಮಾರು ನಾಲ್ಕು ಗಂಟೆಗಳ ವಿಚಾರಣೆಯ ನಂತರ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ಚೆನ್ನೈಗೆ ತೆರಳಿ ನಾಳೆ ಮತ್ತೆ ಕೋರ್ಟ್ ಗೆ ಹಾಜರಾಗುವುದಾಗಿ ಜಯಾ ಜಡ್ಜ್ ಮುಂದೆ ಹೇಳಿಕೆ ನೀಡಿದರು.
ಜಯಲಲಿತ ಜೊತೆ ಬಂದಿದ್ದ ಅವರ ಕ್ಯಾಬಿನೆಟ್ ಪಡೆಗಳನ್ನು ಕೋರ್ಟ್ ಒಳಗೆ ಪ್ರವೇಶಿಸಲು ಅನುಮತಿ ನೀಡಲು ಜಡ್ಜ್ ನಿರಾಕರಿಸಿದ್ದರಿಂದ ಎಲ್ಲರೂ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದರು. ಮಧ್ಯಾಹ್ನದ ಊಟಕ್ಕಾಗಿ ಅಮ್ಮನಿಗೆ ಚೆನ್ನೈನಿಂದ ವೆಜಿಟೆಬಲ್ ಸ್ಯಾಂಡ್ವಿಚ್ ತರಿಸಲಾಗಿತ್ತು. ತೀವ್ರ ಬಳಲಿದಂತೆ ಕಂಡು ಬಂದ ಜಯಾ ವಿಶೇಷ ವಿಮಾನದಲ್ಲಿ ಚೆನ್ನೈಗೆ ವಾಪಾಸಾಗಿದ್ದಾರೆ.
ಕರ್ನಾಟಕ ಸರಕಾರ ಜಯಾಗೆ ಅಭೂತಪೂರ್ವ ರಕ್ಷಣೆ ಒದಗಿಸಿತ್ತು. ಒಂದೂವರೆ ಮೀಟರ್ ಗೆ ಒಬ್ಬರಂತೆ ನಗರದ ಸಿಲ್ಕ್ ಬೋರ್ಡ್ ವೃತ್ತದಿಂದ ಮತ್ತು ಅತ್ತಿಬೆಲೆ ಚೆಕ್ ಪೋಸ್ಟ್ ನಿಂದ ಸೆಂಟ್ರಲ್ ಜೈಲ್ ವರೆಗೆ ಖಾಕಿ ಪಡೆಗಳು ಕಾವಲು ಕಾಯುತ್ತಿದ್ದರು, ನಾಳೆ ಕೂಡ ಇದು ಮುಂದುವರಿಯಲಿದೆ.
ಕೇಸಿನ ಹಿನ್ನಲೆ: 1991-96 ರ ಅವಧಿಯಲ್ಲಿ ಅಕ್ರಮವಾಗಿ 66 ಕೋಟಿ ರೂ. ಗಳಿಸಿದ ಆರೋಪವನ್ನು ಜಯಲಲಿತಾ ಅವರ ಮೇಲೆ ಹೊರೆಸಲಾಗಿದೆ. ವಿಚಾರಣೆಗೆ ಈವರೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಜಯಲಲಿತಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೂಡಾ ಒಮ್ಮೆ ಕೋರಿದ್ದರು.ಕೊನೆಗೆ ಮಧ್ಯೆ ಪ್ರವೇಶಿಸಿದ ಸರ್ವೋಚ್ಚ ನ್ಯಾಯಾಲಯ ಖುದ್ದು ಹಜಾರಾಗಲೇ ಬೇಕೆಂದು ಆದೇಶ ನೀಡಿದ್ದರಿಂದ ಜಯಾ ವಿಶೇಷ ಕೋರ್ಟ್ ಮುಂದೆ ಹಾಜರಾಗಿದ್ದಾರೆ.












Click it and Unblock the Notifications