ಮಾನೆ ಸಾವಿನ ಕೇಸ್ ಸಿಬಿಐಗೆ ವಹಿಸಲು ಆಗ್ರಹ

ಈ ಪ್ರಕರಣದಲ್ಲಿ ಎಲ್ ಟಿಟಿಐ, ಎಎನ್ ಎಫ್ ಹಾಗೂ ಜನಪ್ರತಿನಿಧಿಗಳ ಹೆಸರು ಕೇಳಿ ಬಂದಿರುವುದರಿಂದ ಈ ಘಟನೆಯ ಬಗ್ಗೆ ಸಿಬಿಐ ಉನ್ನತ ತಂಡದಿಂದ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಆಗ್ರಹಿಸಿದೆ.
ಘಟನಾ ಸ್ಥಳ ಮತ್ತು ಪರಿಸರದ ಜನತೆಯ ಹೇಳಿಕೆಯಂತೆ ಇಷ್ಟು ವರ್ಷದಲ್ಲಿ ಈ ಭಾಗದಲ್ಲಿ ಯಾವುದೇ ನಕ್ಸಲ್ ಚಟುವಟಿಕೆಗಳಾಗಲಿ ಕುರುಹುಗಳಾಗಲಿ ಪತ್ತೆಯಾಗಿರುವುದಿಲ್ಲ. ಹಾಗಿರುವಾಗ ಇಲ್ಲಿ ನಕ್ಸಲೀಯರು ಇಲ್ಲಿ ಬಂದಿರುವ ಸಾಧ್ಯತೆ ವಿರಳವಾಗಿದೆ.
ಅಲ್ಲದೆ ಪೇದೆ ಎಂ.ಎಸ್. ಮಾನೆಯವರ ಬೆನ್ನಿಗೆ ಗುಂಡು ತಾಗಿರುವುದು. ಗುಂಡು ಒಳಹೊಕ್ಕ ಜಾಗದಲ್ಲಿ 6.5 ಸೆಂ.ಮೀ ಗಾಯವಾಗಿರುವುದು, ಮೂರು ಬೆರಳು ತೂರಿಸುವಷ್ಟು ಆಳವಾದ ಗಾಯವಾಗಿರುವುದು ಇದು ಶಿಕಾರಿಗಳ ಗುಂಡಿಗೆ ಬಲಿಯಾಗಿದ್ದಲ್ಲ ಎಂದು ಸ್ಪಷ್ಟಪಡಿಸುತ್ತದೆ.
ಗುಂಡು ದೇಹದೊಳಗೆ ಹೊರಹೋಗದೇ ಇರುವುದು ಮತ್ತು ನಾಪತ್ತೆಯಾಗಿರುವುದು ಮೊದಲಾದ ಘಟನೆಗಳನ್ನು ನೋಡುವಾಗ ಈ ಘಟನೆಯ ಬಗ್ಗೆ ಸಾಕಷ್ಟು ಅನುಮಾನಗಳು ಕಂಡು ಬರುತ್ತಿದೆ.
ಈ ಬಗ್ಗೆ ಪುಷ್ಟೀಕರಣವಾಗುವಂತೆ ಮಾಧ್ಯಮಗಳಲ್ಲೂ ಊಹಾಪೋಹ ಸುದ್ದಿಗಳು ಹರಡುತ್ತಿವೆ. ಆ ಹಿನ್ನಲೆಯಲ್ಲಿ ಘಟನೆಯ ಬಗ್ಗೆ ಉನ್ನತ ಮಟ್ಟದ ಸಿಬಿಐ ಅಧಿಕಾರಿಗಳ ತಂಡದಿಂದ ತನಿಖೆ ನಡೆದು ಸತ್ಯಾಂಶ ಹೊರಬರಬೇಕಾದ ಅಗತ್ಯತೆ ಇದೆ ಎಂದು ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಮತ್ತು ಕಾರ್ಯದರ್ಶಿ ಅನೀಸ್ ಗೇರುಕಟ್ಟೆ ಆಗ್ರಹಿಸಿದ್ದಾರೆ.












Click it and Unblock the Notifications