ರಾಜಕೀಯ ಮಹತ್ವಾಕಾಂಕ್ಷೆ ನಟರಾಜ್ ಬಲಿ ತೆಗೆಯಿತೆ?

ಅವರನ್ನು ಬಲ್ಲವರ ಪ್ರಕಾರ, ನಟರಾಜ್ ಅವರು ಯಾರ ವಿರುದ್ಧವೂ ವೈಷಮ್ಯ ಕಟ್ಟಿಕೊಂಡಿರಲಿಲ್ಲ. ಅವರಿಗೆ ಯಾವುದೇ ಬಿಸಿನೆಸ್ ಇರಲಿಲ್ಲ, ಚೀಟಿ ವ್ಯವಹಾರ ಮಾಡುತ್ತಿರಲಿಲ್ಲ, ರಿಯಲ್ ಎಸ್ಟೇಟ್ ದಂಧೆ ಇರಲಿಲ್ಲ. ಯಾರ ವಿರುದ್ಧವೂ ಕೆಟ್ಟ ಮಾತು ಆಡಿದವರಲ್ಲ, ಯಾರನ್ನೂ ನೋಯಿಸಿದವರಲ್ಲ ಎಂಬುದು ಅವರ ಬೆಂಬಲಿಗರ ಅಳಲು.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಕೃಪಾಪೋಷಿತರಾಗಿದ್ದ ನಟರಾಜ್ ಮಹತ್ವಾಕಾಂಕ್ಷಿಯಾಗಿದ್ದು ಸತ್ಯ. 1985ರಿಂದ ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಗರಡಿಯಲ್ಲಿ ಪಳಗಿ ಬಂದಿದ್ದ ನಟರಾಜ್ ರಾಜಕೀಯವಾಗಿ ಬೇರುಗಳನ್ನು ಬಲಪಡಿಸಿಕೊಳ್ಳುತ್ತಿದ್ದರು. ಆದರೆ, ಷಡ್ಯಂತ್ರದ ವಾಸನೆ ಗ್ರಹಿಸದಿರುವುದೇ ಅವರಿಗೆ ಮುಳುವಾಯಿತೆ?
ಶ್ರೀರಾಂಪುರಂ ಮತ್ತು ಓಕಳಿಪುರಂ ಎರಡೂ ಗಾಂಧಿನಗರ ವಾರ್ಡಿನ ಪಕ್ಕದ ವಾರ್ಡುಗಳು. ಈ ಎರಡು ವಾರ್ಡುಗಳ ರಕ್ತಸಿಕ್ತ ಇತಿಹಾಸ ಎಲ್ಲರಿಗೂ ತಿಳಿದದ್ದೇ ಇದೆ. ಅವರ ಹತ್ಯೆಗೆ ಬಳಸಲಾದ ಲಾಂಗ್ ಮತ್ತು ಮಚ್ಚುಗಳನ್ನು ಆ ಪ್ರದೇಶಗಳಿಂದಲೇ ಹಿರಿದುಕೊಂಡು ಬರಲಾಯಿತೆ? ಪೊಲೀಸರು ರಕ್ತದ ಜಾಡುಹಿಡಿದು ಸಾಗಬೇಕಿದೆ.
ನಗರದ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಈಗಾಗಲೆ ಆರು ಅಧಿಕಾರಿಗಳ ತಂಡವನ್ನು ರಚಿಸಿದ್ದು, ತನಿಖೆ ಆರಂಭಿಸಿರುವ ಪೊಲೀಸರು ಹಂತಕರ ಸುಳಿವು ದೊರೆತಿದೆ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮಿರ್ಜಿಯವರ ತಂಡ ಭೂಗತ ಲೋಕದ ಮೇಲೆ ಮುರಿದುಕೊಂಡು ಬಿದ್ದಿತ್ತು. ಮತ್ತೆ ಇನ್ನೊಂದು ಇಂಥದೇ ಘಟನೆ ನಡೆಯುವ ಮೊದಲು ದುರುಳರನ್ನು ಮಟ್ಟಹಾಕಬೇಕಿದೆ.
ಮಾರುತಿ ಕಾರು ಪತ್ತೆ : ನಟರಾಜ್ ಹತ್ಯೆಗೆ ಬಳಸಿದ್ದಾರೆನ್ನಲಾದ ಬಿಳಿ ಬಣ್ಣದ ಮಾರುತಿ ಕಾರನ್ನು (ಸಿಕೆಎಚ್ 4362) ವೈಯಾಲಿಕಾವಲ್ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಕಾರಲ್ಲಿ ಹತ್ಯೆಗೆ ಬಳಸಿದ್ದ ರಕ್ತಸಿಕ್ತ ಲಾಂಗ್ ಮತ್ತು ಮಚ್ಚುಗಳು ದೊರೆತಿವೆ. ಕಾರಿನ ಮಾಲಿಕರಿಗಾಗಿ ಹುಡುಕಾಟ ನಡೆದಿದೆ.
ಕಳೆದ ತಿಂಗಳು 17ನೇ ತಾರೀಖಿನಂದು ಬಿಬಿಎಂಪಿ ನೌಕರ ಮುತ್ಯಾಲಪ್ಪರನ್ನು ಕಚೇರಿ ಎದುರೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಗ ಬಿಬಿಎಂಪಿ ಕಾರ್ಪೊರೇಟರ್ ನಟರಾಜ್ ಅವರನ್ನು ಮಲ್ಲೇಶ್ವರಂ ಸರ್ಕಲ್ ಬಳಿ ಅಟ್ಟಾಡಿಸಿಕೊಂಡು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.












Click it and Unblock the Notifications