ಅನಿರೀಕ್ಷಿತ ಬೆಳವಣಿಗೆಯಲ್ಲಿ ಮುಂದಿನ ಲೋಕಾಯುಕ್ತ ಯಾರಾಗಲಿದ್ದಾರೆ?

ರಾಜ್ಯ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾ. ಎನ್ ಕೆ ಸೋಧಿ, ಸುಪ್ರೀಂಕೋರ್ಟಿನ ಹಾಲಿ ನ್ಯಾಯಾಧೀಶ ಆರ್ ವಿ ರವಿಚಂದ್ರನ್ ಮತ್ತು ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾ. ಎಸ್ ಆರ್ ಬನ್ನೂರ್ ಮಠ್ ಅವರುಗಳ ಹೆಸರು ಹೊಸ ಲೋಕಾಯುಕ್ತಕ್ಕೆ ಕೇಳಿಬಂದಿದೆ.
ಇವರಲ್ಲಿ ನ್ಯಾ. ಎನ್ ಕೆ ಸೋಧಿ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಕೊಪ್ಪಳ ಉಪಚುನಾವಣೆ ನಂತರವಷ್ಟೇ ಲೋಕಾಯುಕ್ತಕ್ಕೆ ಹೊಸಬರನ್ನು ನೇಮಕ ಮಾಡುವ ಸಾಧ್ಯತೆ ಇದೆ.
ಪ್ರಸ್ತುತ ಷೇರು ನ್ಯಾಯಾಧಿಕರಣದ ಮುಖ್ಯಸ್ಥರಾಗಿರುವ ಸೋಧಿ ಅವರು ರಾಜ್ಯ ಸರಕಾರದ ನೇಮಕವನ್ನು ಒಪ್ಪಿಕೊಳ್ಳದಿದ್ದಲ್ಲಿ ಆರ್ ವಿ ರವಿಚಂದ್ರನ್ ನೇಮಕಗೊಳ್ಳುವ ಸಾಧ್ಯತೆ ಇದೆ. ರವಿಚಂದ್ರನ್, ಮುಂದಿನ ತಿಂಗಳು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾಗಲಿದ್ದಾರೆ. ರಾಜ್ಯ ಸರಕಾರ ಅಲ್ಲಿಯವರೆಗೂ ಕಾಯುವ ಸಾಧ್ಯತೆಯಿದೆ.
ಸದ್ಯಕ್ಕೆ ಲೋಕಾಯುಕ್ತ ಹೊಣೆ ಯಾರ ಹೆಗಲಿಗೆ ?
ಈ ಮಧ್ಯೆ, ಒಂದನೇ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್ ಬಿ ಮಜಗೆ ಅವರು ಉಸ್ತುವಾರಿ ಲೋಕಾಯುಕ್ತರಾಗಿ ಕೆಲಸ ನಿರ್ವಹಿಸಲಿದ್ದಾರೆ. ಕಾಯಂ ಲೋಕಾಯುಕ್ತರ ನೇಮಕದವರೆಗೂ ಇವರೇ ಉಸ್ತುವಾರಿ ಲೋಕಾಯುಕ್ತ ಹುದ್ದೆಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ನಿವೇಶನ ಪ್ರಕರಣ ಹಿನ್ನೆಲೆಯಲ್ಲಿ ಶಿವರಾಜ್ ಪಾಟೀಲ್ ಅವರು ಸೋಮವಾರ ಸಂಜೆ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಮಂಗಳವಾರ ಮಧ್ಯಾಹ್ನ ಅಂಗೀಕರಿಸಿ, ಹೊಸ ಲೋಕಾಯುಕ್ತರ ನೇಮಕಕ್ಕೆ ಹಸಿರು ನಿಶಾನೆಯನ್ನು ತೋರಿದ್ದಾರೆ.












Click it and Unblock the Notifications